ಬೆಂಗಳೂರು,ಜು.24- ಜನರ ಆಶಯಕ್ಕೆ ಅನುಗುಣವಾಗಿ ಸದನದ ಗೌರವಕ್ಕೆ ಚ್ಯುತಿ ಬಾರದಂತೆ ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ನನಗೆ ನೀಡಿರುವ ಈ ಮಹತ್ವದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ಈ ಹುದ್ದೆಯನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೊತೆ ಸಿ.ಟಿ.ರವಿ, ಎನ್.ರವಿಕುಮಾರ್ರವರು ಕೂಡ ಆಕಾಂಕ್ಷಿಗಳಾಗಿದ್ದರು.
ಅಂತಿಮವಾಗಿ ಪಕ್ಷವು ನನಗೆ ಜವಾಬ್ದಾರಿ ನೀಡಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮತ್ತಿತರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ನಾನು ಮೂಲತಃ ಅಂಬೇಡ್ಕರ್ ವಾದಿ. ಅವರ ಆಶಯಗಳನ್ನಿಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ನನಗೆ ಬಂಗಾರಪ್ಪನವರು ರಾಜಕೀಯ ಗುರುಗಳು. ನಾನು ಅಂದೆಯೇ ರಾಜಕೀಯ ಮುನ್ನಲೆಗೆ ಬರಬೇಕಿತ್ತು. ಕೆಲವು ಕಾರಣಗಳಿಂದ ಸಾಧ್ಯವಾಗಲಿಲ್ಲ. ಯೋಗ ಇರಲಿಲ್ಲವೋ ಅಥವಾ ಯೋಗ್ಯತೆ ಇರಲಿಲ್ಲವೋ ಗೊತ್ತಿಲ್ಲ. ನನಗೆ ಪಕ್ಷ ಜವಾಬ್ದಾರಿ ನೀಡಿದೆ. ಅದನ್ನು ಜವಾಬ್ದಾರಿಯುತವಾಗಿ ನಡೆಸುವುದಾಗಿ ತಿಳಿಸಿದರು.