ಮೈಸೂರು, ಮೇ 23– ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜಾಮೀನು ಪಡೆದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ವಿದೇಶಿ ಬಾತುಕೋಳಿ ಸಾಕಿದ್ದರ ಸಂಬಂಧವಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ.
ಮೈಸೂರಿನಲ್ಲಿರುವ ಫಾರ್ಮ್ ಹೌಸ್ ನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿದೇಶಿ ಮೂಲದ ಅಬಾರ್ ಹೆಡೆಡ್ ಗೂಸ್‌ಬಿ ಎಂಬ ಬಾತುಕೋಳಿಗಳನ್ನು ಸಾಕಿದ್ದನ್ನು ಸಂದರ್ಶನವೊಂದರಲ್ಲಿ ತೋರಿಸಿದ್ದರು. ಇದರ ಸಂಬಂಧ ಕೆಂಪಯ್ಯನ ಹುಂಡಿಯಲ್ಲಿರುವ ದರ್ಶನ್ ಅವರ ತೋಟದ ಮನೆ ಮೇಲೆ ಆ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ವಿದೇಶಿ ಪ್ರಬೇಧದ ಬಾತುಕೋಳಿ ಗಳನ್ನು ವಶವಡಿಸಿಕೊಂಡಿದ್ದರು.
ಈ ಬಾತುಕೋಳಿಗಳನ್ನು ನನಗೆ ನಮ್ಮ ಸ್ನೇಹಿತರು ನೀಡಿದ್ದಾಗಿ ನಟ ದರ್ಶನ್ ಅವರು ದಾಳಿಯ ವೇಳೆ ತಿಳಿಸಿದ್ದರು. ಮಧ್ಯ ಏಷ್ಯಾ ಪ್ರದೇಶಗಳಲ್ಲಿ ಬಾರ್ ಹೆಡೆಡ್ ಗೂಸ್ (ಬಾತುಕೋಳಿ)ಗಳು ಹೆಚ್ಚಾಗಿ ಕಂಡುಬರಲಿದ್ದು, ಇವು ವಲಸೆ ಹಕ್ಕಿಗಳಾಗಿವೆ. ವನ್ಯಜೀವಿ ಸಂರಕ್ಷಣೆಯ ಕಾಯ್ದೆ ಅನುಸಾರ ಈ ಹಕ್ಕಿಗಳನ್ನು ಸಾಕುವುದು ಅಪರಾಧ ವಾಗಿದೆ.
ದರ್ಶನ್ ಅವರ ತೋಟದ ಮನೆಯ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಬಾರ್ ಹೆಡೆಡ್ ಗೂಸ್ ಗಳನ್ನು ವಶಪಡಿಸಿಕೊಂಡಿದ್ದ ಅರಣ್ಯಾಧಿಕಾರಿಗಳು ನಟನ ವಿರುದ್ಧ ನಿಷೇಧಿತ ವನ್ಯಪಕ್ಷಿಗಳ ಸಾಕಾಣೆಗಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯು ಮೈಸೂರು ಜಿಲ್ಲೆಯ ಟಿ.ನರಸೀಪುರದ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಇದರ ವಿಚಾರಣೆಯ ಸಂಬಂಧ ಜುಲೈ 4 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರಿಗೆ ಸಮನ್ಸ್ ನೀಡಲಾಗಿದೆ. ಪ್ರಾಣಿ ಪ್ರೇಮಿಯಾದ ದರ್ಶನ್ ಅವರ ಫಾರ್ಮ್ ಹೌಸ್‌ನಲ್ಲಿ ಹಸು, ಎತ್ತು, ಕುದುರೆ, ಗಿಳಿಗಳು, ಬಾತುಕೋಳಿ ಮುಂತಾದ ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದಾರೆ.