Friday, November 22, 2024
Homeರಾಜ್ಯಸುಮಲತಾ ಮುಂದಿನ ನಡೆಯೇನು..? ಸಚಿವ ಚೆಲುವರಾಯಸ್ವಾಮಿ ಹೇಳಿದ್ದೇನು..?

ಸುಮಲತಾ ಮುಂದಿನ ನಡೆಯೇನು..? ಸಚಿವ ಚೆಲುವರಾಯಸ್ವಾಮಿ ಹೇಳಿದ್ದೇನು..?

ಮಂಡ್ಯ, ಮಾ.25- ಮಾಜಿ ಸಂಸದೆ ಸುಮಲತಾ ಅವರನ್ನು ಈ ಹಿಂದೆ ಕಾಂಗ್ರೆಸ್‍ಗೆ ಬರುವಂತೆ ಆಹ್ವಾನ ನೀಡಲಾಗಿತ್ತು. ಆದರೆ ಆಗ ಅವರು ನಾನೇಕೆ ಆ ಪಕ್ಷಕ್ಕೆ ಹೋಗಲಿ ಎಂದು ಹೇಳಿ ನಮಗೆ ಮುಜುಗರ ಉಂಟು ಮಾಡಿದರು. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ಎಚ್ಚರಿಕೆಯ ಹೇಳಿಕೆಗಳನ್ನು ನೀಡುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ಆದರೆ ಈವರೆಗೂ ಸುಮಲತಾ ಅವರ ಜೊತೆ ಯಾವುದೇ ಮಾತುಕತೆ ನಡೆದಿಲ್ಲ. ಈ ಹಿಂದೆ ಸುಮಲತಾ ಅವರನ್ನು ಪಕ್ಷಕ್ಕೆ ಕರೆಯುತ್ತೇವೆ ಎಂದು ನಾನೇ ಹೇಳಿಕೆ ನೀಡಿದಾಗ ಸುಮಲತಾ ಅವರು ನೀಡಿದ ಪ್ರತ್ಯುತ್ತರ ನನಗೆ ಮುಜುಗರ ಉಂಟುಮಾಡಿತ್ತು ಎಂದರು.

ಅಂಬರೀಶ್ ಮತ್ತವರ ಕುಟುಂಬದ ಜೊತೆಗೆ ರಾಜಕೀಯ ಹೊರತಾದ ಸೌಹಾರ್ದತೆಯಿದೆ. ಈಗಲೂ ನಾವು ಸುಮಲತಾ ಅವರ ಜೊತೆ ಉಭಯ ಕುಶಲೋಪರಿ ಮಾತನಾಡುತ್ತೇವೆ. ಆದರೆ ರಾಜಕೀಯ ಚರ್ಚೆ ಮಾಡುವುದಿಲ್ಲ. ನಿನ್ನೆಯವರೆಗೂ ಮಂಡ್ಯದಲ್ಲಿ ಸುಮಲತಾ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಿನ್ನೆ ಬಿಜೆಪಿ ವರಿಷ್ಠರ ಮಾಹಿತಿ ಪ್ರಕಾರ ಕೋಲಾರ, ಮಂಡ್ಯ, ಹಾಸನವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ. ಈಗ ಸುಮಲತಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನಮಗೆ ಗೊತ್ತಿಲ್ಲ ಎಂದು ಹೇಳಿದರು.

ಬಿಜೆಪಿಯ ಮಾಜಿ ಶಾಸಕ ನಾರಾಯಣಗೌಡ ಹಾಗೂ ಜೆಡಿಎಸ್‍ನ ಮಾಜಿ ಶಾಸಕರು ಹಾಗೂ ಕೆ.ಆರ್.ಪೇಟೆ ಗಾಂಧಿ ಎಂದೇ ಹೆಸರಾದ ಕೃಷ್ಣ ಅವರ ಹಿಂಬಾಲಕರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ.ಮಾಜಿ ಸಚಿವ ಎಲ್.ಆರ್.ಶಿವರಾಮೇಗೌಡರವರು ಕಾಂಗ್ರೆಸ್‍ಗೆ ಮರಳಿ ಬರುವ ಬಗ್ಗೆ ಅಲ್ಲಲ್ಲಿ ಮಾತನಾಡಿದ್ದಾರೆ. ಆದರೆ ನನ್ನ ಜೊತೆ ನೇರವಾದ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿಯವರು ಮಂಡ್ಯದಿಂದ ಲೋಕಸಭಾ ಅಭ್ಯರ್ಥಿಯಾಗುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ರಾಮನಗರ ದೇವೇಗೌಡರನ್ನು ಒಮ್ಮೆ ಹಾಗೂ ಕುಮಾರಸ್ವಾಮಿಯವರನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಅಂತಹ ಜಿಲ್ಲೆಯನ್ನು ಬಿಟ್ಟು ಮಂಡ್ಯಕ್ಕೆ ಬರುತ್ತಿದ್ದಾರೆ ಎಂಬ ಬಗ್ಗೆ ಅಸಮಾಧಾನಗಳು ಕೇಳಿಬರುತ್ತಿವೆ.

ಕುಮಾರಸ್ವಾಮಿಯವರು ಎಲ್ಲಾ ಭಾಗಗಳನ್ನೂ ನನ್ನ ಕರ್ಮಭೂಮಿ ಎನ್ನುತ್ತಾರೆ. ಮಧುಗಿರಿ ವಿಧಾನಸಭಾ ಕ್ಷೇತ್ರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳನ್ನು ನನ್ನ ಕರ್ಮಭೂಮಿ ಎನ್ನುತ್ತಾರೆ. ಕೋಲಾರ, ಮೈಸೂರಿನಲ್ಲಿ ಬೇರೆ ರೀತಿ ಇರುತ್ತಾರೆ. ಹುಟ್ಟೂರು ಹಾಸನ ಎನ್ನುತ್ತಾರೆ. ಮಂಡ್ಯ ನನ್ನ ಮೊದಲ ಆದ್ಯತೆ ಎನ್ನುತ್ತಾರೆ. ತುಮಕೂರನ್ನು ಕರ್ಮಭೂಮಿ ಎಂದು ಹೇಳಿಕೊಳ್ಳುತ್ತಾರೆ. ಅವರು ರಾಷ್ಟ್ರನಾಯಕರ ಮಗ. ನಮಗೆ ಅದರ ಬಗ್ಗೆ ಆಕ್ಷೇಪವಿಲ್ಲ. ಅವರು ಎಲ್ಲಿಂದ ಎಲ್ಲಿಗೆ ಬೇಕಾದರೂ ಬಂದು ಭಾಷಣ ಮಾಡಲಿ. ಆದರೆ ಅಭ್ಯರ್ಥಿಯಾಗುವಾಗ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದರು.

ಕುಮಾರಸ್ವಾಮಿಯವರು ರಾಮನಗರವನ್ನು ತಿರಸ್ಕಾರ ಮಾಡಿ ಬರುವ ಬಗ್ಗೆ ಮಂಡ್ಯದ ಜನ ಯೋಚಿಸಬೇಕು. ಅದೇ ರೀತಿ ಸ್ಥಳೀಯರು ಕುಮಾರಸ್ವಾಮಿಯವರ ನಿಲುವುಗಳ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು. ಮಂಡ್ಯದ ಅಭ್ಯರ್ಥಿ ಸ್ಟಾರ್ ಚಂದ್ರು ಏ.1 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಈಗಾಗಲೇ ಸರಣಿ ಸಭೆಗಳನ್ನು ನಡೆಸಿ ಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿದೆ ಎಂದರು.

RELATED ARTICLES

Latest News