Friday, July 11, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಗಜಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ತಾಯಿ, ಗಣ್ಯರಿಂದ ದರ್ಶನ

ಗಜಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ತಾಯಿ, ಗಣ್ಯರಿಂದ ದರ್ಶನ

Chamundeshwari adorned with Gajalakshmi ornaments

ಮೈಸೂರು,ಜು.11- .11- ಆಷಾಢ ಮಾಸದ ಮೂರನೇ ಶುಕ್ರವಾರದ ಅಂಗವಾಗಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂದು ಗಜಲಕ್ಷ್ಮಿ ಮತ್ತು ನಾಗಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಅಪಾರ ಭಕ್ತರು ದೇವಿಯ ವೈಭವವನ್ನು ಕಣ್ಣುಂಬಿಕೊಂಡರು.

ಆಷಾಢ ಮಾಸದ ಸಂಭ್ರಮ ಚಾಮುಂಡಿ ಬೆಟ್ಟದಲ್ಲಿ ಅದ್ದೂರಿಯಾಗಿ ನೆರವೇರುತ್ತಿದ್ದು, ಗರ್ಭಗುಡಿಯೊಳಗಿನ ಚಾಮುಂಡೇಶ್ವರಿ ತಾಯಿ ನಾಗಲಕ್ಷ್ಮಿ ಅಲಂಕಾರದಲ್ಲಿದ್ದರೇ ಇತ್ತ ಉತ್ಸವಮೂರ್ತಿ ಚಾಮುಂಡೇಶ್ವರಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ನಾಡ ದೇವತೆ ನೋಡಲು ಎರಡು ಕಣ್ಣು ಸಾಲದಂತಾಗಿತ್ತು.

ದೇವಾಲಯದ ಒಳಾಂಗಣವನ್ನು ಇಂದು ಕಮಲದ ಹೂವಿನಿಂದ ಅಲಂಕಾರ ಮಾಡಲಾಗಿದ್ದು, ಮುಂಜಾನೆ ದೇವಾಲಯದ ಪ್ರದಾನ ಅರ್ಚಕರಾದ ಡಾ.ಶಶಿಶೇಖ‌ರ್ ದೀಕ್ಷಿತ್ ಹಾಗೂ ಪುರೋಹಿತರು ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮ ಅರ್ಚನೆ, ಮಹಾಮಂಗಳಾರತಿ ನೆರವೇರಿಸಲಾಯಿತು. ತಾಯಿಯ ದರ್ಶನ ಪಡೆಯಲು ಮುಂಜಾನೆ 5 ಗಂಟೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಮೆಟ್ಟಿಲು ಮಾರ್ಗವಾಗಿ ಬರುತ್ತಿದ್ದ ದೃಶ್ಯಗಳು ಕಂಡುಬಂದವು.

ಕಳೆದ ರಾತ್ರಿಯೇ ಬೆಟ್ಟಕ್ಕೆ ಭಕ್ತರು ಆಗಮಿಸುತ್ತಿದ್ದರು. ಮುಂಜಾಗ್ರತೆ ಕ್ರಮವಾಗಿ ರಾತ್ರಿ 10 ಗಂಟೆಯಿಂದಲೇ ವಾಹನ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.ಮೆಟ್ಟಿಲುಗಳ ಮೂಲಕ ಹತ್ತಿ ಬರುವ ಭಕ್ತರಿಗೆ ಬೆಳಿಗ್ಗೆ 5 ರಿಂದ ಸಂಜೆ 6 ರವರೆಗೂ ಕಾಲಾವಕಾಶ ಕಲ್ಪಿಸಲಾಗಿತ್ತು. ಬೆಟ್ಟಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಲಲಿತಮಹಲ್ ಪಾರ್ಕಿಂಗ್ ಸ್ಥಳದಿಂದ ಬೆಳಿಗ್ಗೆ 5 ಗಂಟೆಯಿಂದಲೇ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.

ದೇವಿಯ ದರ್ಶನ ಪಡೆದ ಗಣ್ಯರು:
ಮೂರನೇ ಶುಕ್ರವಾರದ ಪ್ರಯುಕ್ತ ಇಂದು ಗೃಹ ಸಚಿವ ಪರಮೇಶ್ವರ್, ಸಚಿವರಾದ ಲಕ್ಷ್ಮಿಹೆಬ್ಬಾಳಕರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಚಲನಚಿತ್ರ ನಟ ಸುದೀಪ್ ಸೇರಿದಂತೆ ಮತ್ತಿತರ ಗಣ್ಯರು ದೇವಿಯ ದರ್ಶನ ಪಡೆದರು.

ಎರಡನೇ ಶುಕ್ರವಾರಕ್ಕಿಂತ ಇಂದು ಭಕ್ತರ ಸಂಖ್ಯೆ ಹೆಚ್ಚಳವಾಗಿತ್ತು. ದೇವಾಲಯದ ಆಡಳಿತ ಮಂಡಳಿ, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳು ಕ್ತರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿತ್ತು.

ಎಂದಿನಂತೆ ಬೆಟ್ಟ ಹತ್ತಿ ಬರುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಹಾಗೂ ಎರಡು ಸಾವಿರ ಮುನ್ನೂರು ರೂ. ಟಿಕೆಟ್ ಪಡೆದ ಭಕ್ತರಿಗೆ ಧರ್ಮದರ್ಶನ ಮಾಡಲಾಗಿತ್ತು. ಭಕ್ತರು ಟಿಕೆಟ್ ಪಡೆದು ದೇವಿಯ ದರ್ಶನ ಪಡೆದು ಪುನೀತರಾದರು. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

RELATED ARTICLES

Latest News