ಮೈಸೂರು,ಜು.17- ಚಾಮುಂಡಿಬೆಟ್ಟ ದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಉತ್ಸವ ಲಕ್ಷಾಂತರ ಭಕ್ತರ ಸಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮೈಸೂರು ರಾಜವಂಶಸ್ಥರ ಕುಲದೇವ ತೆಯೂ ಅದ ಚಾಮುಂಡೇಶ್ವರಿಯ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ದೇವಸ್ಥಾನದಲ್ಲಿ ಮುಂಜಾನೆ 4 ಗಂಟೆಯಿಂದ ಪೂಜಾ ಕೈಂಕರ್ಯಗಳು ಆರಂಭಗೊಂಡವು.ದೇವಿಯ ಮೂರ್ತಿಗೆ ಬೆಟ್ಟದಲ್ಲಿರುವ ದೇವಿ ಕೆರೆಯಿಂದ ತಂದ ಶುದ್ದ ಜಲದಿಂದ ಅಭಿಷೇಕ ಮಾಡಿ ನಂತರ ತಾಯಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಬಳಿಕ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಕುಂಕುಮಾರ್ಚನೆ, ಸಹಸ್ರನಾಮಾರ್ಚನೆ ನೆರವೇರಿಸಲಾಯಿತು.
ನಂತರ ಮಹಾ ಮಂಗಳಾರತಿ ಬಳಿಕ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಇರಿಸಿ, ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು ಮತ್ತೆ ದೇವಸ್ಥಾನದ ಮುಂಭಾಗದಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.
ಅರಮನೆ ಪೊಲೀಸ್ ಬ್ಯಾಂಡ್ ಜೊತೆಗೆ ಮಂಗಳವಾದ್ಯ, ಛತ್ರಿ, ಚಾಮರಗಳೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ವರ್ಧಂತಿ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರು, ಗಣ್ಯರಿಗೆ ಜಿಲ್ಲಾಡಳಿತ ಅಗತ್ಯ ಸೌಲಭ್ಯ ಕೈಗೊಂಡಿತ್ತು.ವರ್ಧಂತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೆಚ್ವು ಭಕ್ತರು ಆಗಮಿಸಿದ್ದರಿಂದ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರು ಚಾಮುಂಡಿ ಸನ್ನಿಧಿಯಲ್ಲಿ ದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿ ದೇವಿಯ ವರ್ಧಂತಿ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿರಲಿಲ್ಲ.
ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಭಕ್ತಾದಿಗಳಿಗಾಗಿ ಉಚಿತ ಬಸ್ ಸೇವೆಯನ್ನು ಕಲ್ಪಿಸಲಾಗಿತ್ತು.ಚಾಮುಂಡೇಶ್ವರಿ ದೇವಿಯ ವರ್ಧಂತಿ ಪ್ರಯುಕ್ತ ನಗರದ ಹಲವು ಭಾಗಗಳಲ್ಲಿ ಸಾರ್ವಜನಿಕವಾಗಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಹಮಿಕೊಂಡು ಪ್ರಸಾದ ವಿನಿಯೋಗ ಮಾಡಲಾಯಿತು.
- ರೌಡಿ ಬಿಕ್ಲುಶಿವ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
- ನೈರುತ್ಯ ವಿಭಾಗದ ಡಿಸಿಪಿ ಕಚೇರಿ ಕಾರ್ಯಾರಂಭ
- ವೈಭವದಿಂದ ಜರುಗಿದ ಚಾಮುಂಡೇಶ್ವರಿ ವರ್ಧಂತಿ ಉತ್ಸವ
- ಕೊಡಗು, ಉತ್ತರ ಕನ್ನಡದಲ್ಲಿ ಮಳೆ ಅಬ್ಬರ, ಶಾಲೆಗಳಿಗೆ ರಜೆ
- ಛತ್ತೀಸ್ಗಡ : ಹೈಟೆಕ್ ಸಾಧನಗಳನ್ನು ಬಳಸಿ ಸರ್ಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಕಲು