Friday, September 20, 2024
Homeರಾಜಕೀಯ | Politicsಚನ್ನಪಟ್ಟಣ ಉಪಚುನಾವಣೆ : ಬಿಜೆಪಿ-ಜೆಡಿಎಸ್‌‍ನಲ್ಲಿ ರಾಜಕೀಯ ಲೆಕ್ಕಾಚಾರ ಜೋರು

ಚನ್ನಪಟ್ಟಣ ಉಪಚುನಾವಣೆ : ಬಿಜೆಪಿ-ಜೆಡಿಎಸ್‌‍ನಲ್ಲಿ ರಾಜಕೀಯ ಲೆಕ್ಕಾಚಾರ ಜೋರು

BJP And JDS

ಬೆಂಗಳೂರು,ಸೆ.9– ಒಕ್ಕಲಿಗ ಪ್ರಬಲ ನಾಯಕರಿಬ್ಬರ ನಡುವಿನ ಪ್ರತಿಷ್ಠೆಯ ಕಣವಾಗಿರುವ ರಾಮನಗರ ಜಿಲ್ಲೆ ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್‌ ವಿಚಾರದಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ನಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಇಡೀ ರಾಜ್ಯದಲ್ಲಿಯೇ ಮನೆಮಾತಾಗಿದ್ದು, ದಿನಕಳೆದಂತೆ ಕದನ ಕುತೂಹಲ ಹೆಚ್ಚಾಗುತ್ತಿದೆ. ಉಪ ಚುನಾವಣೆಯ ರಣಕಣವೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನಿರ್ಧಾರದ ಮೇಲೆ ನಿಂತಿದೆ.

ಎನ್‌ಡಿಎ ಅಭ್ಯರ್ಥಿಯಾಗಿಯೇ ನಾನು ಕಣಕ್ಕಿಳಿಯುತ್ತೇನೆ ಎಂದಿರು ಬಿಜೆಪಿ ವಿಧಾನಪರಿಷತ್‌ ಸದಸ್ಯರೂ ಆಗಿರುವ ಸಿ.ಪಿ.ಯೋಗೇಶ್ವರ್‌ ಅವರು, ಒಂದು ವೇಳೆ ಪಕ್ಷದ ಟಿಕೆಟ್‌ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ನಂತರ ದಿನಗಳಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದು ಸಹಜವಾಗಿ ಎನ್‌ಡಿಎ ಮೈತ್ರಿಕೂಟವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್‌‍ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ 80,677 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್‌‍ ಅಭ್ಯರ್ಥಿ ಗಂಗಾಧರ್‌ ಎಸ್‌‍. ಕೇವಲ 15,374 ಮತ ಪಡೆದಿದ್ದರು.

╰┈➤ Please Follow EE SANJE Whatsapp Channel for more updates

ಚನ್ನಪಟ್ಟಣ ಉಪಚುನಾವಣೆಗೆ ಡಿಕೆ ಬ್ರದರ್ಸ್‌ ಅಚ್ಚರಿಯ ಅಭ್ಯರ್ಥಿ ಕಂಬಿ ಹಿಂದೆ ಇದ್ದಾರೆ, ಈ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಗೆಲ್ಲಬೇಕು ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ತಂತ್ರ ರೂಪಿಸುತ್ತಿದ್ದಾರೆ. ಕ್ಷೇತ್ರಕ್ಕೆ ಪದೇ-ಪದೇ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಕಂಡ ಡಿ. ಕೆ. ಸುರೇಶ್‌ ಚನ್ನಪಟ್ಟಣದಿಂದ ಕಣಕ್ಕಿಳಿಯಬಹುದು ಎಂಬ ಸುದ್ದಿಗಳು ಹಬ್ಬಿವೆ.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌‍ ಮೈತ್ರಿ ಮುಂದುವರೆಯಲಿದೆಯೇ? ಹಾಗಾದರೆ ಮೈತ್ರಿಕೂಟದ ಅಭ್ಯರ್ಥಿ ಯಾರು?, ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯುವುದಿಲ್ಲವೇ? ಎಂಬ ಹಲವಾರು ಪ್ರಶ್ನೆಗಳಿವೆ.

ಈ ನಡುವೆ ಸಿಪಿ ಯೋಗೇಶ್ವರ್‌ ಅವರು ಕಾಂಗ್ರೆಸ್‌‍ಗೆ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿಯೂ ಹರಿದಾಡತೊಡಗಿತು. ಚನ್ನಪಟ್ಟಣದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿಯಲು ಪ್ರಯತ್ನ ನಡೆಸುತ್ತಿದ್ದ ಯೋಗೇಶ್ವರ್‌ಗೆ ಎಚ್‌ಡಿಕೆ ಅಡ್ಡಿಯಾಗಿದ್ದಾರೆ. ಹೀಗಾಗಿ ಅವರು ಟಿಕೆಟ್‌ ಸಿಗದೇ ಇದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಸಿಎಂ ಡಿಕೆಶಿ ಚನ್ನಪಟ್ಟಣದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಈ ಹೇಳಿಕೆ ವಾಸ್ತವದಲ್ಲಿ ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುವುದು ಕುತೂಹಲದ ಸಂಗತಿಯಾಗಿದೆ.
ಈಗಾಗಲೇ ಕನಕಪುರ ಶಾಸಕರಾಗಿರುವ ಅವರು ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಗೆದ್ದರೆ ಎರಡು ಕ್ಷೇತ್ರದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾದರಲ್ಲಿ ಅವರ ತಮ ಸ್ವಕ್ಷೇತ್ರಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಅಲ್ಲಿ ಮತ್ತೊಮೆ ಉಪ ಚುನಾವಣೆ ನಡೆಯಬೇಕು. ಹೀಗಾದಲ್ಲಿ ಇದು ತಪ್ಪು ಸಂದೇಶಗಳಿಗೆ ಆಸ್ಪದ ಕೊಡುತ್ತದೆ.

ಎಚ್‌ಡಿಕೆ ನಡೆ ಏನು? :
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೈತ್ರಿಗೆ ಮತದಾರರಿಂದ ಬೆಂಬಲ ವ್ಯಕ್ತವಾಗಿದೆ. ಫಲಿತಾಂಶದ ಮೂಲಕ ಬಿಜೆಪಿ ಹೈಕಮಾಂಡ್‌ ಖುಷಿಪಡಿಸಿರುವ ಎಚ್‌.ಡಿ.ಕುಮಾರಸ್ವಾಮಿಗೆ ಇದೀಗ ದಿಲ್ಲಿ ನಾಯಕರ ಮಧ್ಯದಲ್ಲಿ ಒಳ್ಳೆಯ ಸ್ಥಾನಮಾನ ಲಭಿಸಿದೆ. ತಾನು ರಾಜೀನಾಮೆ ನೀಡಿದ್ದ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಎಚ್‌‍.ಡಿ.ಕುಮಾರಸ್ವಾಮಿಗೆ ಪ್ರತಿಷ್ಠೆಯ ಸಂಗತಿಯಾಗಿದೆ.

ತಮ ಸಾಂಪ್ರದಾಯಿಕ ಎದುರಾಳಿ ಯೋಗೇಶ್ವರ್‌ಗೆ ನಮ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಲಿ ಎಂದು ಕೆಲ ಜೆಡಿಎಸ್‌‍ ಕಾರ್ಯಕರ್ತರು ಸಹಮತ ವ್ಯಕ್ತಪಡಿಸುತ್ತಿದ್ದಾರಾದರೂ, ಯೋಗೇಶ್ವರ್‌ ವಿರುದ್ಧವಾಗಿ ರಾಜಕಾರಣ ಮಾಡಿಕೊಂಡು ಬಂದಿರುವ, ಅವರ ಜತೆಗಿನ ರಾಜಕೀಯ ಸಮಯದಲ್ಲಿ ಕೈಸುಟ್ಟುಕೊಂಡಿರುವ ಕೆಲ ಮುಖಂಡರಿಗೆ ಯೋಗೇಶ್ವರ್‌ಗೆ ಟಿಕೆಟ್‌ ನೀಡಲು ಇಷ್ಟವಿಲ್ಲ. ಹೀಗಾಗಿ ಅವರು ಕುಮಾರಸ್ವಾಮಿ ಮೇಲೆ ಒತ್ತಡ ಹಾಕುತ್ತಿದ್ದಾರೆ.

ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ವಿರೋಧವೇನೂ ಇಲ್ಲ. ಆದರೆ, ಅವಕಾಶ ಕೈತಪ್ಪಿದರೆ ಯೋಗೇಶ್ವರ್‌ ಯಾವ ಹೆಜ್ಜೆ ಇಡಬಹುದು ಎಂಬ ಬಗ್ಗೆ ಅಂದಾಜು ಮಾಡಿರುವ ಕುಮಾರಸ್ವಾಮಿ ಕಾರ್ಯಕರ್ತರಿಗೆ ಯೋಗೇಶ್ವರ್‌ ಒಪ್ಪಿಸಿಕೊಂಡು ಬನ್ನಿ ಎನ್ನುವ ಟಾಸ್ಕ್‌ ನೀಡುವ ಮೂಲಕ ಜಾಣ ನಡೆ ಇರಿಸಿದ್ದಾರೆ.

ತಂತ್ರಗಾರಿಕೆ :
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌‍ ಮತ್ತು ಬಿಜೆಪಿ ಮೈತ್ರಿಯಿಂದಾಗಿ 50 ಸಾವಿರಕ್ಕೂ ಹೆಚ್ಚು ಲೀಡ್‌ ಪಡೆಯಬೇಕಿದ್ದ ಎನ್‌ಡಿಎ ಅಭ್ಯರ್ಥಿಗೆ ದೊರೆತಿದ್ದು ಕೇವಲ 23 ಸಾವಿರ ಮತಗಳ ಮುನ್ನಡೆಯಷ್ಟೇ ಕಾಂಗ್ರೆಸ್‌‍ ಅಭ್ಯರ್ಥಿ 85 ಸಾವಿರ ಮತಗಳನ್ನು ಗಳಿಸಿದ್ದು ಮೈತ್ರಿ ನಾಯಕರನ್ನು ಚಿಂತೆಗೀಡು ಮಾಡಿದೆ.

ಕಳೆದ 20 ವರ್ಷಗಳಿಂದ ಜೆಡಿಎಸ್‌‍ ವಿರುದ್ಧವಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದ ಯೋಗೇಶ್ವರ್‌ ಇದೇ ಮೊದಲ ಬಾರಿಗೆ ಜೆಡಿಎಸ್‌‍ ಜತೆಗೆ ಕೈಜೋಡಿಸಿದ್ದಾರೆ. ಜೆಡಿಎಸ್‌‍ನ ಕಟ್ಟಾ ವಿರೋಧಿಯಾಗಿದ್ದ ಸೈನಿಕ ಮೈತ್ರಿ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಉತ್ಸಾಹ ತೋರಿದ್ದರ ಹಿಂದೆ ಚನ್ನಪಟ್ಟಣವನ್ನು ಭದ್ರಮಾಡಿಕೊಳ್ಳುವ ತಂತ್ರಗಾರಿಕೆ ಇತ್ತು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ವಿರೋಧಿಗಳ ದಾರಿ ತಪ್ಪಿಸುವ ಪ್ರಯತ್ನವೇ? :
ಡಿಕೆ ಶಿವಕುಮಾರ್‌ ಪದೇ ಪದೇ ಭಿನ್ನ ಹೇಳಿಕೆ ಕೊಡುವ ಮೂಲಕ ವಿರೋಧಿಗಳ ದಾರಿ ತಪ್ಪಿಸುತ್ತಿದ್ದಾರಾ? ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ. ಆದರೆ ಅಸಲಿ ರಣತಂತ್ರ ಬೇರೆಯೇ ಇದೆ ಎಂಬ ಮಾತುಗಳು ಡಿಕೆಶಿ ಆಪ್ತ ವಲಯದಿಂದ ಕೇಳಿಬರುತ್ತಿದೆ. ಒಟ್ಟಿನಲ್ಲಿ ಡಿಕೆಶಿ ನಡೆಯಂತೂ ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲಿ ಈಗಾಗಲೇ ಅಂತೆ ಕಂತೆಗಳು ಸಾಕಷ್ಟು ಚರ್ಚೆಯಾಗುತ್ತಿದ್ದು, ಎಲ್ಲರ ಕೇಂದ್ರ ಬಿಂದುವಾಗಿ ಸಿಪಿವೈ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಬಳಿಕ ಮತ್ತೊಂದು ಸುತ್ತಿನ ಚುನಾವಣಾ ಕಾವು ಏರಿಕೆಯಾಗುತ್ತಿದೆ.

ಇದರ ನಡುವೆ ಚನ್ನಪಟ್ಟಣ ಜನತೆ ಮನಗೆಲ್ಲುವ ಸಲುವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಈಗಾಗಲೇ ಕ್ಷೇತ್ರದಾದ್ಯಂತ ಸುತ್ತಿ ಮತದಾರರ ಮುಟ್ಟುವ ಒಂದು ಹಂತದ ಕಸರತ್ತು ಮುಗಿಸಿದ್ದಾರೆ. ಪ್ರತಿ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಜನಾಭಿಪ್ರಾಯ ಸಂಗ್ರಹಣೆಗೆ ಸಾಕಷ್ಟು ಒತ್ತು ನೀಡಿದ್ದಾರೆ. ಇದರ ನಡುವೆ ಕಾಂಗ್ರೆಸ್‌‍ನಿಂದ ಅಚ್ಚರಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕ್ಷೇತ್ರದ ರಣಕಣ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

RELATED ARTICLES

Latest News