ಬೆಂಗಳೂರು,ಸೆ.13- ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನವೇ ದೋಷಾರೋಪ ಪಟ್ಟಿ ಸೋರಿಕೆಯಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಇಂದಿಲ್ಲಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಪ್ರಜ್ವಲ್ರೇವಣ್ಣ ಅವರ ವಿರುದ್ಧ 2ನೇ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಯಿಸಿದರು.
ಸರ್ಕಾರದ ನ್ಯೂನತೆ, ಲೋಪದೋಷಗಳನ್ನು ಮುಚ್ಚಿಕೊಳ್ಳಲು ಏನೇನು ನಡೆಯುತ್ತಿದೆ ಎಂಬುದು ಗೊತ್ತಿದೆ. ಸೋರಿಕೆಯಾದ ವಿಚಾರಗಳು ಯಾರ್ಯಾರ ಕೈ ಸೇರುತ್ತಿದೆ ಎನ್ನುವುದು ಗೊತ್ತಿದೆ ಎಂದರು.ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುವ ಮುನ್ನ ಸೋರಿಕೆ ಮಾಡುತ್ತಿರುವವರು ಯಾರು?, ನ್ಯಾಯ ಕೊಡಿಸುವವರು ಯಾರು? ಎಂದು ಪ್ರಶ್ನಿಸಿದರು.
ವಾಲೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿ ಮಾಜಿ ಸಚಿವ ನಾಗೇಂದ್ರ ಅವರನ್ನು ಎ1 ಆರೋಪಿ ಎಂದು ಹೇಳಿದೆ. ಆದರೆ ಎಸ್ಐಟಿ ಆ ರೀತಿ ಆರೋಪಿಯನ್ನಾಗಿ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಬಿಟ್ಟು ನಮನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ನಾನು 40 ವರ್ಷ ದಿಂದ ರಾಜಕಾರಣದಲ್ಲಿದ್ದೇನೆ. 25 ವರ್ಷ ಶಾಸಕನಾಗಿದ್ದೇನೆ.
ಯಾವುದಕ್ಕೂ ಹೆದರುವುದಿಲ್ಲ. ಒಂದು ವೇಳೆ ತಪ್ಪು ಮಾಡಿದ್ದರೆ ನ್ಯಾಯಾಲಯ ನೇಣಿಗೆ ಹಾಕಲಿ. ವಿಧಾನಸಭೆಯಲ್ಲಿ ಶಾಸಕನಾಗಿ, ಸಚಿವನಾಗಿ ನನ್ನ ವಿರುದ್ಧ ತನಿಖೆ ಮಾಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೇನೆ ಎಂದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲೆ ಸಿಓಡಿ ತನಿಖೆ ಮಾಡಿಸಿದ್ದರು. ಬಳಿಕ ಅದೇ ಅಧಿಕಾರಿ ದೇವೇಗೌಡರ ಕಾಲು ಕಟ್ಟಿದ್ದರು ಎಂದು ಹೇಳಿದರು.
ನಮಗೆ ದೇವರ ಮೇಲೆ ನಂಬಿಕೆ, ಕಾನೂನಿನ ಮೇಲೆ ನಂಬಿಕೆ, ನ್ಯಾಯಾಂಗದ ಬಗ್ಗೆ ಗೌರವವಿದೆ. ನಮ ಮೇಲಿನ ಆರೋಪಗಳ ಬಗ್ಗೆ ನ್ಯಾಯಾಲಯದ ಮೂಲಕವೇ ಹೋರಾಟ ನಡೆಸಿದ್ದೇವೆ ಎಂದು ಅವರು ತಿಳಿಸಿದರು.
ವಿಚಾರಣೆ ನೆಪದಲ್ಲಿ ನಮ ಮನೆಯ ಕೆಲಸಗಾರರು, ಅಡುಗೆಭಟ್ಟರು, ಆಪ್ತ ಸಹಾಯಕರನ್ನು ಬಿಟ್ಟಿಲ್ಲ. ವಿಚಾರಣೆ ಮಾಡಿದ್ದಾರೆ. ಈ ಹಿಂದೆಯೇ ಬಿಜೆಪಿ ನಾಯಕರು ಹೇಳಿದ್ದರು. ಕಾಂಗ್ರೆಸ್ ಅನ್ನು ನಂಬಬೇಡಿ ಎಂದು. ವಿಚಾರಣೆ ನೆಪದಲ್ಲಿ ನಮಗೆ ಯಾವ ರೀತಿ ತೊಂದರೆ ಕೊಟ್ಟರು ಎಂಬುದನ್ನು ಎಳೆಎಳೆಯಾಗಿ ವಿಧಾನಸಭೆ ಅಧಿವೇಶನದಲ್ಲಿ ಹೇಳುತ್ತೇನೆ. ಎಸ್ಐಟಿ ಯಾವ ರೀತಿ ತನಿಖೆ ನಡೆಸುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ.
ನಾಗಮಂಗಲದ ಘಟನೆಗೆ ಸರ್ಕಾರವೇ ನೇರ ಹೊಣೆ :
ನಾಗಮಂಗಲದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದಿರುವ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ. ರಾಜ್ಯಸರ್ಕಾರವೇ ನೇರ ಹೊಣೆ ಎಂದು ರೇವಣ್ಣ ಇದೇ ಸಂದರ್ಭದಲ್ಲಿ ಆರೋಪಿಸಿದರು.
ಕಳೆದ ಬಾರಿಯೂ ಗಲಾಟೆಯಾಗಿತ್ತು. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ, ಬಿಗಿಯಾದ ಪೊಲೀಸ್ ವ್ಯವಸ್ಥೆ ಮಾಡಬೇಕಿತ್ತು, ಮಾಡಿಲ್ಲ. ಆದರೂ ಗೃಹಸಚಿವರು ಈ ಘಟನೆ ಸಣ್ಣದು ಎಂದು ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.