Friday, November 22, 2024
Homeರಾಜ್ಯಪರಿಷತ್‌ ಚುನಾವಣೆ : ಶಾಸಕಾಂಗ ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಪರಿಷತ್‌ ಚುನಾವಣೆ : ಶಾಸಕಾಂಗ ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಮೇ 31- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌‍ ಶಾಸಕಾಂಗ ಸಭೆ ಕರೆದಿದ್ದಾರೆ.

ಜೂ 2 ರಂದು ಸಂಜೆ 6 ಗಂಟೆಗೆ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಲಿದ್ದು, ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ವಿಧಾನಪರಿಷತ್‌ನ ಸಭಾ ನಾಯಕ ಎನ್‌.ಎಸ್‌‍.ಬೋಸರಾಜ್‌ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್‌‍ ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಂ ತಿಳಿಸಿದ್ದಾರೆ.

ವಿಧಾನಪರಿಷತ್‌ ಚುನಾವಣೆಯಲ್ಲಿ ರಹಸ್ಯ ಮತದಾನ ನಡೆಯಲಿದೆ. ಈ ಮೊದಲು ಕೆಲ ಸಂದರ್ಭಗಳಲ್ಲಿ ಅಡ್ಡಮತದಾನ ನಡೆದು ಕಾಂಗ್ರೆಸ್‌‍ನ ಅಧಿಕೃತ ಅಭ್ಯರ್ಥಿಗೆ ಸೋಲು ಕಂಡಿರುವ ಉದಾಹರಣೆಗಳು ಇವೆ. ಈ ಬಾರಿ ಆ ರೀತಿಯಾಗದಂತೆ ಎಚ್ಚರಿಕೆ ವಹಿಸಲು ಕಾಂಗ್ರೆಸ್‌‍ ನಿರ್ಧರಿಸಿದೆ.

ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಹಿಂದುಳಿದ ವರ್ಗಕ್ಕೆ 2, ಲಿಂಗಾಯತ, ಒಕ್ಕಲಿಗ, ಮುಸ್ಲಿಂ, ಕ್ರಿಶ್ಚಿಯನ್‌, ಪರಿಶಿಷ್ಟ ಜಾತಿ ಸೇರಿದಂತೆ ಆಯ್ಕೆಯ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

ಹಾಲಿ ವಿಧಾನಪರಿಷತ್‌ ಸದಸ್ಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಚಿವ ಎನ್‌.ಎಸ್‌‍.ಬೋಸರಾಜು ಅವರ ಕುರಿತು ಗೊಂದಲಗಳಿವೆ. ವಿಧಾನಪರಿಷತ್‌ನ ಅಭ್ಯರ್ಥಿಗಳ ಆಯ್ಕೆಯಲ್ಲೂ ಬಲಾಬಲ ಪ್ರದರ್ಶನ ಪರೋಕ್ಷವಾಗಿ ತಲೆದೋರಿದೆ.

ದೆಹಲಿಯಲ್ಲಿ ನಡೆದ ಸಭೆಯಲ್ಲಿ ಯತೀಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್‌, ಮಾಜಿ ಸಂಸದ ವಿ.ಎಸ್‌‍.ಉಗ್ರಪ್ಪ, ವಿನಯ್‌ಕಾರ್ತಿಕ್‌, ಇಸಾಯಿಲ್‌ ಟಮಟ್ಕರ್‌, ರಮೇಶ್‌ ಬಾಬು, ಡಾ.ಆನಂದಕುಮಾರ್‌, ಬಿ.ಆರ್‌.ನಾಯ್ಡು, ವಿಜಯ್‌ ಮುಳಗುಂದ್‌ ಸೇರಿದಂತೆ ಹಲವರ ಹೆಸರುಗಳು ಅಂತಿಮ ಪಟ್ಟಿಯಲ್ಲಿವೆ.

ಒಟ್ಟು 14 ಜನರ ಅಂತಿಮ ಪಟ್ಟಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಲಿದೆಯೇ? ಅಥವಾ ಹೈಕಮಾಂಡ್‌ ಹೊಸ ಹೆಸರುಗಳನ್ನು ಸೇರ್ಪಡೆ ಮಾಡಲಿದೆಯೇ? ಎಂಬ ಕುತೂಹಲ ಕೆರಳಿದೆ. ಇಂದು ಸಂಜೆ ಅಥವಾ ನಾಳೆಯವರೆಗೂ ಅಂತಿಮ ಪಟ್ಟಿ ಪ್ರಕಟವಾಗುವ ನಿರೀಕ್ಷೆಗಳಿವೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌‍ ಶಾಸಕಾಂಗ ಸಭೆ ಕರೆದಿದ್ದಾರೆ.

RELATED ARTICLES

Latest News