Saturday, August 23, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ | Chikkaballapurಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಇಂದಿಗೆ 18 ವರ್ಷ, ಜ್ವಲಂತ ಸಮಸ್ಯೆಗಳಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಇಂದಿಗೆ 18 ವರ್ಷ, ಜ್ವಲಂತ ಸಮಸ್ಯೆಗಳಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

Chikkaballapur has completed 18 years as a new district, problems have not yet been solved

ಚಿಕ್ಕಬಳ್ಳಾಪುರ,ಆ.23– ಆಗಸ್ಟ್‌ 23, 2007 ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ನೂತನವಾಗಿ ಉದಯವಾಗಿ 18 ವರ್ಷ ಪೂರೈಸಿ ಇಂದಿಗೆ 19ನೇ ವರ್ಷಕ್ಕೆ ಕಾಲಿಟ್ಟಿದೆ ಆಗಾಗಿ ಜಿಲ್ಲೆಗೆ ಇಂದು 18ರ ಹುಟ್ಟುಹಬ್ಬದ ಸಂಭ್ರಮ.

ಜಿಲ್ಲೆ ಉದಯವಾಗಿ 18 ವರ್ಷ ಆದರೂ ಇಲ್ಲಿಯವರೆಗೆ ಇಲ್ಲೊಂದು ಶಾಶ್ವತ ನೀರಾವರಿ ಯೋಜನೆಯ ಕನಸು ಕನಸಾಗೇ ಉಳಿದಿದೆ, ನಿರುದ್ಯೋಗ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಇಂದಿಗೂ ಯಾವುದೇ ಒಂದು ಕೈಗಾರಿಕೆ ಸ್ಥಾಪನೆಯಾಗಿಲ್ಲ ಹೀಗಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ.

ಅಂದಿನಿಂದ ಇಂದಿನವರೆಗೂ ಆಡಳಿತ ನಡೆಸಿದ ಸರ್ಕಾರವಾಗಲಿ ಇಲ್ಲಿನ ಜನಪ್ರತಿನಿಧಿಗಳಾಗಲಿ ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತು ಕೆಲಸ ಮಾಡಿಲ್ಲ ಬದಲಿಗೆ ಸ್ವಾರ್ಥ ರಾಜಕಾರಣದಲ್ಲಿಯೇ ದಿನದೂಡಿತಮ ಬೇಳೆ ಬೇಯಿಸಿಕೊಂಡ ಇಲ್ಲಿನ ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಿದ್ದೆಯ ಮಂಪರಿನಿಂದ ಇನ್ನು ಹೊರಬಂದೇ ಇಲ್ಲ ಈ ವಿಚಾರದಲ್ಲಿ ಜಿಲ್ಲೆಯ ಜನರ ಆಕ್ರೋಶಕ್ಕೆ ಜನಪ್ರತಿನಿಧಿಗಳು ಗುರಿಯಾಗಿದ್ದಾರೆ ಶಾಶ್ವತ ನೀರಾವರಿ ಎಂಬುದು ಇನ್ನೂ ಮರೀಚಿಕೆಯೇ ಆಗಿದೆ.ಇಲ್ಲಿ ಪ್ರಸ್ತುತ ಶಾಸಕ ಮತ್ತು ಸಂಸದರ ಅಭಿವೃದ್ಧಿ ವಿಚಾರದಲ್ಲಿ ಎತ್ತು ಏರಿಗೆ ಹೋರಿನೀರಿಗೆ ಎಂಬಂತ ನಿಲುವಿನಿಂದ ಜನ ಹೈರಾಣಾಗಿದ್ದಾರೆ.

2007ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್‌.ಡಿ. ಕುಮಾರಸ್ವಾಮಿಯವರು ನೂತನ ರಾಮನಗರ ಜಿಲ್ಲೆಯ ಘೋಷಣೆಯೊಂದಿಗೆ ಅವಿಭಜಿತ ಕೋಲಾರದಿಂದ ವಿಭಜನೆಗೊಂಡು ಚಿಕ್ಕಬಳ್ಳಾಪುರ ನೂತನ ಜಿಲ್ಲೆಯನ್ನಾಗಿ ಘೋಷಿಸಿದರು.

ಈ ಮೂಲಕ ರಾಜ್ಯದ 29ನೇ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಉದಯವಾಗಿ 18 ವರ್ಷಗಳು ಪೂರೈಸಿದೆ. ಜಿಲ್ಲೆ ಸ್ಥಾಪನೆಯಾಗುವ ವೇಳೆಗೆ 6 ತಾಲೂಕುಗಳು ಇದ್ದು, ಈಗ ಜಿಲ್ಲೆಯಲ್ಲಿ 8 ತಾಲೂಕುಗಳಾಗಿವೆ, ಮಂಚೇನಹಳ್ಳಿ ಮತ್ತು ಚೇಳೂರು ಹೊಸ ತಾಲೂಕುಗಳಾಗಿ ಘೋಷಿಸಲಾಗಿದೆ ದುರಂತ ಎಂದರೆ ಇಲ್ಲಿಗೆ ಬೇಕಾದ ಜನಸೌಧ ಅಥವಾ ತಾಲೂಕು ಮಟ್ಟದ ಕಚೇರಿ ಕಟ್ಟಡಗಳ ಭಾಗ್ಯ ದೊರೆಯಲೇ ಇಲ್ಲ.

ಬೆಂಗಳೂರು ನಗರಕ್ಕೆ ಕೇವಲ 56 ಕಿ.ಮೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 22 ಕಿ.ಮೀ ಸಮೀಪದಲ್ಲಿದ್ದರೂ, ಕಳೆದ 18 ವರ್ಷಗಳಲ್ಲಿ ಜಿಲ್ಲೆಗೆ ನಿರೀಕ್ಷೆಯಂತೆ ಅಭಿವೃದ್ಧಿ ದೊರೆತಿಲ್ಲ. ಜಿಲ್ಲೆಯ ಹಿಂದುಳಿದ ಭಾಗಗಳೆಂದು ಪರಿಗಣಿಸಲ್ಪಡುವ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ಈವರೆವಿಗೂ ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಜನ ಹೈರಾಣಾಗಿದ್ದಾರೆ.

ಬಯಲುಸೀಮೆ ಎಂದೆನಿಸಿಕೊಂಡ ಬರಪೀಡಿತ ಚಿಕ್ಕಬಳ್ಳಾಪುರ ಸಿಲ್ಕ್ ಅಂಡ್‌ ಮಿಲ್ಕ್ ಜಿಲ್ಲೆ ಎಂಬ ಹೆಸರಲ್ಲಿ ಪ್ರಸಿದ್ಧವಾದರೂ ಶಾಶ್ವತ ನೀರಾವರಿ ಯೋಜನೆ ಇಲ್ಲಿಯವರೆಗೆ ಜಾರಿಯಾಗಲಿಲ್ಲ. 2014ರಲ್ಲಿ ಶಾಶ್ವತ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಾಗಿ ಎತ್ತಿನ ಹೊಳೆ ಯೋಜನೆ ಆರಂಭಿಸಲಾಯಿತು. ಇದಕ್ಕೆ 20 ಸಾವಿರ ಕೋಟಿ ರೂ. ವೆಚ್ಚ ಆದರೂ ಈ ಯೋಜನೆಯಿಂದ ಇನ್ನೂ ಒಂದು ಹನಿಯೂ ನೀರು ಈ ಭಾಗಕ್ಕೆ ಬರಲಿಲ್ಲ.

ಎತ್ತಿನಹೊಳೆ ಯೋಜನೆ ವಿಳಂಬವಾಗುತ್ತಿರುವುದರಿಂದ, ಕಾಂಗ್ರೆಸ್‌‍ ಸಿದ್ದರಾಮಯ್ಯ ಸರ್ಕಾರ ಎಚ್‌ಎನ್‌ ವ್ಯಾಲಿಯ ಬೆಂಗಳೂರು ನಗರದಲ್ಲಿ ಬಳಸಿದ ಕೊಳಚೆ ನೀರನ್ನು ಒಂದು-ಎರಡು ಹಂತದಲ್ಲಿ ಶುದ್ಧೀಕರಿಸಿ ಜಿಲ್ಲೆಯಲ್ಲಿನ ಎಲ್ಲಾ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿತ್ತು. ಈ ಯೋಜನೆಯಿಂದ ಈಗಾಗಲೇ 44 ಕೆರೆಗಳನ್ನು ತುಂಬಿಸಲಾಗಿದೆ. ಇನ್ನೂ ಹೆಚ್ಚಿನ ಕೆರೆಗಳನ್ನು ತುಂಬಿಸುವ ಕೆಲಸ ಮುಂದುವರೆದಿದೆ ಆದರೂ ಮೂರನೇ ಹಂತದ ನೀರು ಶುದ್ಧೀಕರಣಕ್ಕೆ ಸರ್ಕಾರ ಮೀನಾ ಮೇಷ ಎಣಿಸುತಿದೆ.

2013ರಿಂದ 2018ರ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಿಲ್ಲೆಯತ್ತ ವಿಶೇಷ ಗಮನಹರಿಸಿದ್ದರಾದರೂ. ಈ ಅವಧಿಯಲ್ಲಿ ಅವರು ಗಮನ ಕೊಡದ ಕಾರಣ ಅಭಿವೃದ್ಧಿಯ ಕಾರ್ಯಗಳು ಹೇಳಿಕೊಳ್ಳುವಷ್ಟು ಆಗಲಿಲ್ಲ.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ತಲಾ ಒಂದೊಂದು ವೈದ್ಯಕೀಯ ಕಾಲೇಜುಗಳಿದ್ದರೂ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಅಗತ್ಯವಿತ್ತು. ಈ ಕೊರತೆ ನೀಗಿಸಲು ತ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್‌ ತಮ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಹೊರವಲಯದಲ್ಲಿ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಿಕೊಳ್ಳುವ ಮೂಲಕ ಸ್ವಾರ್ಥ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ.

ಜಿಲ್ಲೆ ಉದಯವಾಗಿ 18 ವರ್ಷವಾದರೂ ಇಲ್ಲಿಯವರೆಗೆ ಚಿಕ್ಕಬಳ್ಳಾಪುರ ಡಿಸಿಸಿಸಿ ಬ್ಯಾಂಕ್‌ ಸ್ಥಾಪನೆಯಾಗಿಲ್ಲ. ಬಿಜೆಪಿ ಸರ್ಕಾರ ಅವಧಿಯಲ್ಲಿ ಸ್ಥಾಪನೆಗೊಂಡ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಮುಂದುವರಿಸಲಾಗಿದೆ. ಈಗ ಅದಕ್ಕೆ ನೂತನ ಆಡಳಿತ ಸಮಿತಿಯನ್ನು ರಚಿಸುವ ಪ್ರಕ್ರಿಯೆ ನಡೆಯುತ್ತಿದೆ.

ಅಂದು ನೂತನವಾಗಿ ಉದಯಗೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ದಿವಂಗತ ಪೊಫೆಸರ್‌ ಮಮ್ತಾಜ್‌ ಅಲಿ ಖಾನ್‌ ಅವರ ಕಾಲದಲ್ಲಿ ಮೇಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ ಭೂಮಿ ಅನುಮೋದಿಸಿ ಶಿಲಾನ್ಯಾಸ ಮಾಡಲಾಗಿತ್ತು. ಆ ಬಳಿಕ ಅಂಥ ಯಾವುದೇ ದೊಡ್ಡ ಕೈಗಾರಿಕೆ ಸ್ಥಾಪನೆ ಕೂಡ ಆಗಲಿಲ್ಲ. ಕಾಂಗ್ರೆಸ್‌‍ಸರ್ಕಾರದಿಂದ ಜಿಲ್ಲೆಯಲ್ಲಿ ಹೊಸದಾಗಿ ಗೌರಿಬಿದನೂರು ತಾಲೂಕಿನ ಆಲಿಪುರ ಹಾಗೂ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್‌ ದರ್ಜೆಗೆ ಏರಿಸಲಾಗಿದೆ.

ಜಿಲ್ಲೆಯ ಮೊದಲ ಉಸ್ತುವಾರಿ ಸಚಿವರಾಗಿ ಅಲಂಗೂರು ಶ್ರೀನಿವಾಸ್‌‍ ಅವರಿಂದ ಇಂದಿನ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಹಾಗೂ ಮೊದಲ ಜಿಲ್ಲಾಧಿಕಾರಿ ಸುಬೋಧ್‌ ಯಾದವ್‌ರಿಂದ ಇಂದಿನ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ಅವರಿಗೂ ಎಲ್ಲರೂ ತಮ ತಾತ್ವಿಕ ದೃಷ್ಟಿಕೋನದಂತೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಪಟ್ಟಿದ್ದಾರೆ. ಪ್ರತಿಯೊಬ್ಬರ ಪ್ರಯತ್ನದಿಂದ ಜಿಲ್ಲೆ ಇತರ ಜಿಲ್ಲೆಗಳ ಜೊತೆ ಹೋಲಿಕೆ ಮಾಡಿದರೆ ಕೆಲವಾರು ನ್ಯೂನ್ಯತೆಗಳ ಹೊರತು ಜಿಲ್ಲೆಯ ಅಭಿವೃದ್ಧಿ ಮಂದಗತಿಯಲ್ಲಿ ಸಾಗುತ್ತಿದೆ.

ಚಿಕ್ಕಬಳ್ಳಾಪುರ ಜನತೆಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇನ್ನಷ್ಟು ನಿರೀಕ್ಷೆ ಇದ್ದು ಮುಂಬರುವ ದಿನಗಳಲ್ಲಾದರೂ ಜಿಲ್ಲಾಭಿವೃದ್ಧಿಗೆ ವೇಗ ಸಿಗುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸುವರೇ ಕಾದು ನೋಡಬೇಕು.

RELATED ARTICLES

Latest News