ಮೈಸೂರು,ಜ.4- ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಶಾಲೆಯಲ್ಲಿ ಕೇಕ್ ತಿಂದಿದ್ದ 45ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ-ಭೇದಿಯಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೋಳನಹಳ್ಳಿಯ ಶ್ರೀ ಮಂಜುನಾಥ ಅನುದಾನಿತ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ನಡೆದಿದೆ.
ಹೊಸವರ್ಷದ ಅಂಗವಾಗಿ ಕೇಕ್ ಕಟ್ ಮಾಡಿ ಮಕ್ಕಳಿಗೆ ವಿತರಿಸಿದ್ದಾರೆ. ಕೇಕ್ ತಿಂದಿದ್ದರಿಂದಾಗಿ ನಿನ್ನೆ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಮಕ್ಕಳನ್ನು ಬೋಳನಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಮೆಲೆ ಬಂದ ಮಕ್ಕಳನ್ನು ಪರೀಕ್ಷಿಸಿದ ವೈದ್ಯೆ ದಾಕ್ಷಾಯಣಿ ಹಾಗೂ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಇಒ ಮಹದೇವ್, ಮಕ್ಕಳ ಆರೋಗ್ಯ ವಿಚಾರಿಸಿ ಕೇಕ್ ತಿಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಶಾಲೆಯ ಮುಖ್ಯಶಿಕ್ಷಕ ಅಶ್ವತ್‌್ಥ ಅವರನ್ನು ತರಾಟೆಗೆ ತೆಗೆದುಕೊಂಡರು.ಅಲ್ಲದೆ ವೈದ್ಯರಿಂದ ಮಾಹಿತಿ ಪಡೆದು, ಮಕ್ಕಳಿಗೆ ಧೈರ್ಯ ತುಂಬಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ ಇದ್ದರು.
ಭೇದಿ ಕಾಣಿಸಿಕೊಂಡಿದ್ದ 36 ಮಕ್ಕಳ ಪೈಕಿ 6 ಮಕ್ಕಳು ತಕ್ಷಣವೇ ಚೇತರಿಸಿಕೊಂಡಿದ್ದರಿಂದ ಮನೆಗೆ ಕಳುಹಿಸಲಾಗಿದೆ. ಉಳಿದ ಮಕ್ಕಳನ್ನು ದಾಖಲಿಸಿಕೊಂಡು ಸಂಜೆವರೆಗೆ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕೇಕ್‌ನ ಸ್ಯಾಂಪಲ್ ಪಡೆದಿದ್ದು, ಲ್ಯಾಬ್‌ಗೆ ಕಳುಹಿಸಲಾಗುವುದು. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳ ಅಸ್ವಸ್ಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯ ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗುವುದೆಂದು ಬಿಇಒ ಮಹದೇವ್ ತಿಳಿಸಿದ್ದಾರೆ.