ಚಿತ್ರದುರ್ಗ, ಮಾ.5– ತಾಲೂಕಿನ ಸಿಬಾರ ಗ್ರಾಮದ ಬಳಿ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.
ಲಾರಿ ಚಾಲಕ ಹಾಗೂ ಟ್ರಕ್‌ನಲ್ಲಿ ಕಲ್ಲಂಗಡಿ ಸಾಗಿಸುತ್ತಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಭತ್ತ ತುಂಬಿದ್ದ ಲಾರಿ ದಾವಣಗೆರೆ ಕಡೆಗೆ ಹೊರಟಿದ್ದರೆ ಹರಿಯಾಣ ಮೂಲದ ಟ್ರಕ್ ರಸ್ತೆ ಬದಿ ನಿಂತಿತ್ತು.
ಇಂದು ಬೆಳಿಗ್ಗೆ 5.30ರ ಸಂದರ್ಭದಲ್ಲಿ ನಿದ್ದೆ ಮಂಪರಿನಲ್ಲಿದ್ದ ಲಾರಿ ಚಾಲಕ ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಗುದ್ದಿದ್ದಾನೆಂದು ಶಂಕಿಸಲಾಗಿದೆ.
ಮೃತರನ್ನು ಲಾರಿ ಚಾಲಕ ಶೇಖರ್ ಹಾಗೂ ಟ್ರಕ್‌ನ ಚಾಲಕ ಉತ್ತರ ಪ್ರದೇಶ ಅಲಿಗಡ ಜಲ್ಲೆಯ ಉದಲ ಇಲಿಯಾಸ್ ಪುರದ ನಿವಾಸಿ ಜುಬುರುದ್ದೀನ್ (52) ಮತ್ತು ಕ್ಲಿನರ್ ಮಹಮ್ಮದ್ ಖೈಫ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಈ ಟ್ರಕ್ ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಿಂದಾಗಿ ಎರಡೂ ವಾಹನಗಳೂ ಜಖಂಗೊಂಡಿದ್ದು, ರಸ್ತೆ ಯಲ್ಲಿ ಕಲ್ಲಂಗಡಿ ಹಣ್ಣು ಬಿದ್ದು ಹರಡಿಕೊಂಡಿದೆ.
ಮತ್ತೊಂದು ಲಾರಿ ಕೂಡ ಸ್ವಲ್ಪ ಪ್ರಮಾಣದಲ್ಲಿ ಹಾನಿಗೊಂಡಿದ್ದು, ಅದರಲ್ಲಿದ್ದ ಚಾಲಕ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಚಿತ್ರದುರ್ಗ ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಸುದ್ದಿ ತಿಳಿ ಯುತ್ತಿದ್ದಂತೆ ಸಿಬ್ಬಂದಿಗಳೊಂದಿಗೆ ದಾವಿಸಿ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ ಲಾರಿಯ ಟೈಯರ್ ಪಂಚರ್ ಆದ ಕಾರಣ ಚಾಲಕ ಹಾಗೂ ಕ್ಲೀನರ್ ಚಕ್ರ ಬದಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಯಾವುದೇ ಸೂಚನೆ ನೀಡದ ಕಾರಣ ಹಿಂದಿನಿಂದ ಬರುತ್ತಿದ್ದ ವಾಹನಗಳಿಗೆ ಇದು ಕಾಣುತ್ತಿರಲಿಲ್ಲ ಎಂದು ಹೇಳಲಾಗಿದೆ.
ಘಟನೆಯಿಂದಾಗಿ ಕೆಲಕಾಲ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿತ್ತು. ಕ್ರೈನ್ ಬಳಸಿ ವಾಹನಗಳನ್ನು ರಸ್ತೆ ಬದಿಗೆ ಸರಿಸಿ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.