Monday, March 31, 2025
Homeರಾಜ್ಯಹನಿಟ್ರ್ಯಾಪ್ ಪ್ರಕರಣದ ತನಿಖೆ ಆರಂಭಿಸಿದ CID, ಸಚಿವ ರಾಜಣ್ಣ ನಿವಾಸದಲ್ಲಿ ಪರಿಶೀಲನೆ

ಹನಿಟ್ರ್ಯಾಪ್ ಪ್ರಕರಣದ ತನಿಖೆ ಆರಂಭಿಸಿದ CID, ಸಚಿವ ರಾಜಣ್ಣ ನಿವಾಸದಲ್ಲಿ ಪರಿಶೀಲನೆ

CID begins investigation into honeytrap case

ಬೆಂಗಳೂರು, ಮಾ.27- ಹನಿಟ್ರಾಪ್ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದು ಈಗಾಗಲೇ ವಿಚಾರಣೆ ಆರಂಭವಾಗಿದೆ. ಇಂದು ಬೆಳಿಗ್ಗೆ ಸಿಐಡಿಯ ಅಧಿಕಾರಿಗಳು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಅಧಿಕೃತ ನಿವಾಸ ಜಯಮಹಲ್‌ನಲ್ಲಿರುವ ಬಂಗಲೆಗೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಸರ್ಕಾರಿ ಬಂಗಲೆಯಲ್ಲಿ ಯಾರೆಲ್ಲಾ ಇದ್ದಾರೆ, ಯಾವ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸ್ಥಳೀಯವಾಗಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.ಹನಿಟ್ರ್ಯಾಪ್ ಪ್ರಕರಣ ಕಳೆದ ತಿಂಗಳಿನಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ವಲಯದಲ್ಲಿ ಪ್ರಸ್ತಾಪವಾಗಿದ್ದ ಈ ವಿಚಾರವನ್ನು ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸುನಿಲ್‌ ಕುಮಾರ್‌ರವರು ಪ್ರಸ್ತಾಪಿಸಿದರು.

ಯತ್ನಾಳ್‌ರವರ ಪ್ರಸ್ತಾಪಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಚಿವ ಕೆ.ಎನ್.ರಾಜಣ್ಣ ತನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಆಗಿದೆ. ಕರ್ನಾಟಕ ಸಿಡಿ ಮತ್ತು ಪೆನ್‌ ಡ್ರೈವ್ಗಳ ಫ್ಯಾಕ್ಟರಿಯಾಗುತ್ತಿದೆ. ಈ ಕುರಿತು ತಾವು ದೂರು ನೀಡಲಿದ್ದು, ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.ಇದಕ್ಕೆ ಸದನದಲ್ಲೇ ಉತ್ತರ ನೀಡಿದ್ದ ಗೃಹಸಚಿವ ಜಿ.ಪರಮೇಶ್ವರ್, ರಾಜಣ್ಣ ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದರು.

ಮಾರನೇ ದಿನ ಪುನರಪಿ ಚರ್ಚೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡ ತನಿಖೆ ನಡೆಸುವುದಾಗಿ ದೃಢಪಡಿಸಿದ್ದರು. ತನಿಖೆಯ ಸ್ವರೂಪ ಯಾವುದು ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸುವುದಾಗಿ ಇಬ್ಬರು ನಾಯಕರು ಹೇಳಿದ್ದರು. ವಿರೋಧಪಕ್ಷ ಬಿಜೆಪಿ ಸಿಐಡಿ ಅಥವಾ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕೆಂದು ಪಟ್ಟು ಹಿಡಿದತ್ತು. ಈ ವಿಚಾರವಾಗಿ ಭಾರೀ ಗದ್ದಲವೂ ನಡೆದಿತ್ತು.

ಉನ್ನತ ಮಟ್ಟದ ತನಿಖೆಯೆಂದು ಪ್ರಕಟಿಸಿದ ರಾಜ್ಯಸರ್ಕಾರ ಈಗ ಸಿಐಡಿ ತನಿಖೆಗೆ ವಹಿಸಿದೆ. ಹನಿಟ್ರ್ಯಾಪ್ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ 48ಕ್ಕೂ ಹೆಚ್ಚು ಜನರ ಸಿಡಿ ಅಥವಾ ಪೆನ್‌ ಡ್ರೈವ್‌ಗಳು ಹನಿಟ್ರ್ಯಾಪ್ ನಡೆಸುವ ಗುಂಪಿನಲ್ಲಿದೆ ಎಂದು ರಾಜಣ್ಣ ಸ್ಫೋಟಕ ಮಾಹಿತಿ ನೀಡಿದ್ದರು. ಇಂತಹ ಜಠಿಲ ಪ್ರಕರಣವನ್ನು ಅದರಲ್ಲೂ ರಾಷ್ಟ್ರಮಟ್ಟದಲ್ಲಿ ವ್ಯಾಪಿಸಿರುವ ಹಗರಣವನ್ನು ಸಿಐಡಿ ಸಮರ್ಪಕವಾಗಿ ತನಿಖೆ ನಡೆಸಲು ಸಾಧ್ಯವೇ?, ಸಿಐಡಿ ತನಿಖೆಯನ್ನೇ ಸರ್ಕಾರ ಉನ್ನತ ಮಟ್ಟದ ತನಿಖೆ ಎಂದು ಬಿಂಬಿಸಲು ಮುಂದಾಗಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಅಧಿಕೃತ ಮಾಹಿತಿ ಪ್ರಕಾರ, ಸಿಐಡಿ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಪಡೆದು ನಂತರ ಬೇರೆ ಸ್ವರೂಪದ ತನಿಖೆ ನಡೆಸುವ ನಿಟ್ಟಿನಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಹನಿಟ್ರ್ಯಾಪ್ ಪ್ರಯತ್ನಗಳಾಗಿ ಸಾಕಷ್ಟು ದಿನಗಳು ಕಳೆದಿವೆ. ಈಗ ದೂರು ನೀಡುವ ಮೂಲಕ ಬೇರೆಯವರ ಹೆಗಲ ಮೇಲೆ ಬಂದು ಕುಳಿತು ಎದುರಾಳಿಗಳತ್ತ ಗುಂಡು ಹಾರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳಿವೆ.

ಸರ್ಕಾರಕ್ಕೆ ಹನಿಟ್ರ್ಯಾಪ್ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುವ ಇರಾದೆ ಇದ್ದಿದ್ದರೆ ಈ ಮೊದಲೇ ಹೇಳಿದಂತೆ ಉನ್ನತ ಮಟ್ಟದ ತನಿಖೆ ನಡೆಸಬಹುದಿತ್ತು. ಸಿಐಡಿ ತನಿಖೆ ನಡೆಸುವುದೇ ಆಗಿದ್ದರೆ ಅದಕ್ಕೆ ಇಷ್ಟು ದಿನ ಕಾಯುವ ಅಗತ್ಯವಿತ್ತೇ ಎಂಬ ಪ್ರಶ್ನೆ ಉದ್ಭವಿಸಿದೆ. ಹನಿಟ್ರ್ಯಾಪ್ ಆಗಿದ್ದೇ ಆದರೆ ದೂರು ನೀಡಲು ರಾಜಣ್ಣ ವಿಳಂಬ ಮಾಡಿದ್ದೇಕೆ ಎಂಬ ಚರ್ಚೆಗಳು ಜೋರಾಗಿವೆ.

RELATED ARTICLES

Latest News