Sunday, July 27, 2025
Homeರಾಜ್ಯಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆ ಆರಂಭಿಸಿದ ಸಿಐಡಿ

ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆ ಆರಂಭಿಸಿದ ಸಿಐಡಿ

CID starts investigation into Biklu Shiva murder case

ಬೆಂಗಳೂರು,ಜು.25- ರೌಡಿ ಶಿವಪ್ರಕಾಶ್‌ ಅಲಿಯಾಸ್‌‍ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ತನಿಖೆಗಾಗಿ ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕರು ಸಿಐಡಿಗೆ ವರ್ಗಾಹಿಸಿದ್ದಾರೆ.

ಇತ್ತೀಚೆಗೆ ನಗರ ಪೊಲೀಸ್‌‍ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದ ಡಿಜಿಪಿ ಸಲೀಂ ಅವರು ಅಪರಾಧ ಪ್ರಕರಣಗಳ ಬಗ್ಗೆ ವಿಮರ್ಶಿಸಿ, ಈ ಪ್ರಕರಣದ ಬಗ್ಗೆಯೂ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವವಿಭಾಗದ ಪೊಲೀಸರು ಈಗಾಗಲೇ 17 ಮಂದಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಗ್ಗ ಅಲಿಯಾಸ್‌‍ ಜಗದೀಶ ದುಬೈಗೆ ಪರಾರಿಯಾಗಿದ್ದು, ಆತನನ್ನು ವಿದೇಶದಿಂದ ಕರೆತರಲು ಪ್ರಕ್ರಿಯೆಗಳು ನಡೆಯುತ್ತಿವೆ.ಈ ಪ್ರಕರಣದ 5 ನೇ ಆರೋಪಿಯಾಗಿ ಎಫ್‌ಐಆರ್‌ ನಲ್ಲಿ ಶಾಸಕ ಭೈರತಿಬಸವರಾಜು ಅವರ ಹೆಸರು ದಾಖಲಾಗಿದೆ. ತನಿಖಾಧಿಕಾರಿಗಳು ಈಗಾಗಲೇ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ರೌಡಿ ಬಿಕ್ಲು ಶಿವನ ಕೊಲೆಗೂ ಮುನ್ನ ಆರೋಪಿಗಳು ಪೂರ್ವವಿಭಾಗದ ಪ್ರತಿಷ್ಠಿತ ಬಾರ್‌ ಅಂಡ್‌ ರೆಸ್ಟೋರೆಂಟ್‌ವೊಂದರಲ್ಲಿ ಸೇರಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಾಸ್ಟರ್‌ ಪ್ಲಾನ್‌ ಮಾಡಿರುವುದು ಬಾರ್‌ನ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.

ಒಂದೇ ಟೇಬಲ್‌ನಲ್ಲಿ 8 ಮಂದಿ ಆರೋಪಿಗಳು ಕುಳಿತುಕೊಂಡು ಶಿವಪ್ರಕಾಶ್‌ನನ್ನು ಯಾವ ರೀತಿ ಕೊಲೆ ಮಾಡಬೇಕು, ಕೊಲೆ ನಂತರ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಬಿಕ್ಲು ಶಿವನ ಕೊಲೆಯಾದ 15 ನಿಮಿಷದ ನಂತರ ಪ್ರಮುಖ ಆರೋಪಿ ಜಗ್ಗ ತನ್ನ ಮನೆಯಿಂದ ಆಡಿ ಕಾರಿನಲ್ಲಿ ಹೆಣ್ಣೂರು ನಿಂದ ಚೆನೈಗೆ ಹೋಗಿರುವುದು ಟೋಲ್‌ವೊಂದರ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ. ನಂತರ ಅಲ್ಲಿಂದ ಜಗ್ಗ ದುಬೈಗೆ ಪರಾರಿಯಾಗಿದ್ದಾನೆ.ಇದೀಗ ಸಿಐಡಿ ಪೊಲೀಸರು ಆತನ ಬಂಧನಕ್ಕೆ ಹಲವು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.

RELATED ARTICLES

Latest News