ಬೆಂಗಳೂರು,ಡಿ.31- ಹೊಸ ವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಇತರರಿಗೆ ಯಾವುದೇ ರೀತಿಯ ತೊಂದರೆ, ಕಿರುಕುಳ ನೀಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಎಚ್ಚರಿಸಿದ್ದಾರೆ.
ಈ ವರ್ಷದ ಕೊನೆಯ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಗರಾದ್ಯಂತ ನಾವು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿ ಈಗಾಗಲೇ ಕಟ್ಟೆಚ್ಚರ ವಹಿಸಿದ್ದೇವೆ ಎಂದು ವಿವರಿಸಿದರು.
ಕೆಲ ವ್ಯಕ್ತಿಗಳು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪೀಪಿ ಊದುತ್ತಾ ಕರ್ಕಶ ಶಬ್ದವನ್ನುಂಟು ಮಾಡಿ ಬೇರೆಯವರಿಗೆ ಕಿರಿಕಿರಿಯಾಗುವಂತೆ ವರ್ತಿಸುತ್ತಾರೆ. ಆ ರೀತಿ ಮಾಡುವಂತಿಲ್ಲ. ಅಲ್ಲದೆ ವಿಕೃತವಾಗಿ ಮುಖಕ್ಕೆ ಮಾಸ್ಕ್ ಹಾಕಿ ಹೆದರಿಸುವುದು ಮಾಡುವಂತಿಲ್ಲ ಎಂದು ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಹೊಸ ವರ್ಷಾಚರಣೆ ಆಚರಿಸಲು ಕುಟುಂಬ ಸಮೇತ ಬರುತ್ತಾರೆ. ಮಕ್ಕಳು, ಮಹಿಳೆಯರು ಇರುತ್ತಾರೆ. ಈ ರೀತಿ ಮುಖಕ್ಕೆ ಭಯವಾಗುವಂತಹ ಮಾಸ್ಕ್ ಧರಿಸುವುದರಿಂದ ಅವರು ಹೆದರಿಕೊಳ್ಳುತ್ತಾರೆ. ಯಾವುದೇ ಸಂದರ್ಭದಲ್ಲಿ ಅವರನ್ನು ಗುರುತು ಹಚ್ಚಲು ಸಾಧ್ಯವಾಗುವುದಿಲ್ಲ. ಹಾಗಾಗಿ ವಿಕೃತ ಮಾಸ್ಕ್ ಧರಿಸುವಂತಿಲ್ಲ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ನಗರದ ಪೊಲೀಸ್ ಕಾನ್‌್ಸಟೇಬಲ್ನಿಂದ ಹಿಡಿದು ಕಮಿಷನರ್ವರೆಗೂ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳೂ ರಾತ್ರಿ ಕರ್ತವ್ಯದಲ್ಲಿರುತ್ತಾರೆ. ಯಾರಿಗೂ ರಜೆ ನೀಡಿಲ್ಲ. ಎಲ್ಲಾ ಅಧಿಕಾರಿಗಳು ಗಸ್ತಿನಲ್ಲಿರುತ್ತಾರೆ. ನಗರದ ಹೃದಯ ಭಾಗವಲ್ಲದೆ ಹೊರವಲಯದಲ್ಲೂ ಸಹ ಸೂಕ್ತ ಬಂದೊಬಸ್ತ್ ಮಾಡಿದ್ದೇವೆ ಎಂದರು.
ಕಳೆದೆರಡು ತಿಂಗಳಿನಿಂದ ನಾವು ಮಾದಕವಸ್ತುಗಳ ವಿರುದ್ಧ ಸಮರ ಸಾರಿದ್ದೇವೆ. ಇದುವರೆಗೂ 27 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ. ಮುಂದೆಯೂ ಸಹ ಈ ಕಾರ್ಯಾಚರಣೆ ಮುಂದುವರೆ ಯಲಿದೆ ಎಂದು ಹೇಳಿದರು.
ಹೊಸ ವರ್ಷಾಚರಣೆ ಮುಗಿಸಿಕೊಂಡು ಹೋಗುವವರು ಕುಡಿದು ವಾಹನ ಚಾಲನೆ ಮಾಡಬಾರದು. ಅತೀ ವೇಗ ಚಾಲನೆ ಅಪಘಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ವಾಹನ ಸವಾರರು ತಮ ಪ್ರಾಣ ಹಾಗೂ ಇತರರ ಪ್ರಾಣ ಗಮನದಲ್ಲಿಟ್ಟುಕೊಂಡು ಚಾಲನೆ ಮಾಡಬೇಕೆಂದು ಆಯುಕ್ತರು ಸಲಹೆ ಮಾಡಿದ್ದಾರೆ.