ಬೆಂಗಳೂರು,ಆ.13- ಅತಿ ಶೀಘ್ರದಲ್ಲೇ ಬಿಬಿಎಂಪಿ ಅಧಿಕಾರಿಗಳು ಫುಟ್‌ಪಾತ್ ಅಂಗಡಿಗಳ ತೆರವು ಕಾರ್ಯಚರಣೆ ಕೈಗೊಳ್ಳಲಿದೆ.ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ ಈ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಮೊನ್ನೆ ಸುರಿದ ಬಾರಿ ಮಳೆಗೆ ಇಡಿ ನಗರ ತತ್ತರಿಸಿ ಹೋಗಲು ಬೀದಿ ಬದಿ ಅಂಗಡಿಗಳೇ ಕಾರಣ ಎಂಬ ಕಾರಣಕ್ಕೆ ಪಾದಚಾರಿ ಮಾರ್ಗಗಳಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಅಂಗಡಿಗಳ ತೆರವು ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ.
ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕಾಲುವೆ ನೀರು ಉಕ್ಕಿ ಹರಿಯಲು ಕಾರಣ ಎನ್ನುವುದು ಪತ್ತೆಯಾಗಿರುವುದರಿಂದ ಅವರು ಅಕ್ರಮ ಮಳಿಗೆಗಳ ತೆರವಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪುಟ್ಪಾತ್ ಅಂಗಡಿಗಳು ತಮ್ಮ ಅಂಗಡಿಯ ತ್ಯಾಜ್ಯ ಗಳನ್ನು ರಾಜಕಾಲುವೆ ಗೆ ಬೇಕಾಬಿಟ್ಟಿ ಎಸೆಯುತ್ತಿರುವುದರಿಂದ ಡ್ರೈನೇಜ್ ಬ್ಲಾಕ್ ಅಗಿದೆ. ಅದೇ ರೀತಿ ಎಳನೀರು ವ್ಯಾಪಾರಿಗಳು ಖಾಲಿ ಬುರುಡೆಗಳನ್ನೂ ಚರಂಡಿಗೆ ಎಸೆದಿರುವುದು ಕಂಡು ಬಂದಿದೆ.
ಮತ್ತೊಂದು ಕಡೆ ಅಂಗಡಿಯ ತ್ಯಾಜ್ಯ ವಸ್ತುಗಳನ್ನು ಮೋರಿಗೆ ಹಾಕುತ್ತಿರುವುದು ಪತ್ತೆಯಾಗಿರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ.ವ್ಯಾಪಾರಿಗಳ ಈ ಬೇಜವಬ್ದಾರಿತನದಿಂಲೇ ರಾಜಕಾಲುವೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿಲ್ಲ. ಇನ್ನೂ ಕೆಲವು ಕಡೆ ರಾಜಕಾಲುವೆ ಮೇಲೆ ಪುಟ್ಪಾತ್ ಅಂಗಡಿ ನಿರ್ಮಾಣ ಮಾಡಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಅನಧಿಕೃತ ಪುಟ್ಪಾತ್ ಅಂಗಡಿಗಳ ತೆರವಿಗೆ ಡಿಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರದಿಂದ ಅಧಿಕೃತವಾದ ಅಂಗಡಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು ಉಳಿದಂತೆ ಅನಧಿಕೃತ ಪುಟ್ಪಾತ್ ಅಂಗಡಿಗಳ ತೆರವಿಗೆ ಬಿಬಿಎಂಪಿ ಶೀಘ್ರದಲ್ಲೇ ಕಾರ್ಯಚರಣೆ ಕೈಗೊಳ್ಳಲಿದೆ ಎಂದು ಗೊತ್ತಾಗಿದೆ.