ಬೆಂಗಳೂರು, ಆ.12- ವಿಧಾನಸಭೆಯ ಕಾರ್ಯಕಲಾಪ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಈ ನಡುವೆ ವಿರೋಧ ಪಕ್ಷ ಬಿಜೆಪಿ ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ಅವರ ಪದಚ್ಯುತಿಗೆ ಸೂಕ್ತ ಕಾರಣ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ವಿಧಾನಸಭೆಯ ಕಲಾಪ ಆರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೊಕ್ ಸಚಿವ ರಾಜಣ್ಣ ಅವರ ಪದಚ್ಯುತಿಯನ್ನು ಪ್ರಸ್ತಾಪಸಿದರು. ನಿನ್ನೆ ಮಧ್ಯಾಹ್ನ ತಾವು ಈ ವಿಚಾರದ ಬಗ್ಗೆ ಕೇಳಿದಾಗ ಸಂಸದೀಯ ವ್ಯವಹಾರಗಳ ಸಚಿವರು ಮಾಧ್ಯಮಗಳಲ್ಲಿ ಬರುವುದನ್ನೆಲ್ಲಾ ಚರ್ಚೆ ಮಾಡಲಾಗುವುದಿಲ್ಲ ಎಂದಿದ್ದರು.
ಈಗ ರಾಜಪಾಲರೇ ನಿನ್ನೆ ಮಧ್ಯಾಹ್ನ 3 ಗಂಟೆಗೆ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಸಚಿವ ಸಂಪುಟದಿಂದ ರಾಜಣ್ಣ ಅವರನ್ನು ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಸಚಿವರನ್ನು ಕೈಬಿಟ್ಟಿರುವ ಬಗ್ಗೆ ನಾವು ಮಾಧ್ಯಮಗಳಿಂದ ತಿಳಿದುಕೊಳ್ಳಬೇಕೆ? ಸದನಕ್ಕೆ ಮಾಹಿತಿ ನೀಡುವುದು ಸರ್ಕಾರದ ಜವಾಬ್ದಾರಿ ಅಲ್ಲವೆ? ನಮನ್ನು ಕತ್ತಲಿನಲ್ಲಿಡಲಾಗಿದೆ. ತಕ್ಷಣವೇ ಉತ್ತರ ನೀಡಬೇಕು ಯಾವ ಕಾರಣಕ್ಕೆ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಆಂತರಿಕ ವಿಚಾರವನ್ನು ಚರ್ಚೆ ಮಾಡುವುದು ಅನಗತ್ಯ ಎಂದಾಗ, ವಿರೋಧ ಪಕ್ಷದ ಶಾಸಕರಾದ ಸುರೇಶ್‌ಕುಮಾರ್, ಸುನಿಲ್‌ಕುಮಾರ್ ಸೇರಿದಂತೆ ಎಲ್ಲರೂ ಎದ್ದು ನಿಂತು ಆಕ್ಷೇಪಿಸಿದರು. ಇದು ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ ಪಕ್ಷದ ಆಂತರಿಕ ವಿಚಾರವಲ್ಲ ಎಂದು ಪ್ರತ್ಯುತ್ತರಿಸಿದರು.
ಆರ್.ಅಶೋಕ್ ಅವರು ಮುಂದುವರೆದು ರಾಜಣ್ಣ ಅವರ ಬಗ್ಗೆ ಸರ್ಕಾರ, ನಿನ್ನೆಯೇ ಹೇಳಿಕೆ ನೀಡಬೇಕಿತ್ತು. ಆದರೆ ಮೌನವಾಗಿದೆ. ರಾಜಣ್ಣ ಮುಖ್ಯಮಂತ್ರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಅದನ್ನು ಅಂಗೀಕರಿಸಿಲ್ಲ, ಬದಲಾಗಿ ಸಂಪುಟದಿಂದ ವಜಾಗೊಳಿಸಲಾಗಿದೆ. ಸತ್ಯ ಹೇಳಿದ್ದಕ್ಕೆ ಅವರನ್ನು ಬಲಿಪಶು ಮಾಡಲಾಗಿದೆಯೇ? ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡಿದ್ದರು. ಮತಗಳ್ಳತನವಾಗಿಲ್ಲ ಎಂದು ಜನರಿಗೆ ಸತ್ಯ ಹೇಳಿದ್ದಾರೆ. ಈಗ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.
ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ಬಿ.ವೈ. ವಿಜಯೇಂದ್ರ, ರಾಹುಲ್‌ಗಾಂಧಿ ಬೆಂಗಳೂರಿಗೆ ಬಂದು ಮತಗಳ್ಳತನವಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ. ಇದು ಆಂತರಿಕ ವಿಚಾರ ಅಲ್ಲ. ಸದನಕ್ಕೆ ವಿಷಯ ತಿಳಿಯಬೇಕು ಎಂದರು.ಸುರೇಶ್‌ಕುಮಾರ್ ಅವರು, ಸದನ ನಡೆಯುವಾಗ ಇಂತಹ ಮಹತ್ವದ ಘಟನೆ ಬಗ್ಗೆ ನಾವು ಮಾಧ್ಯಮದಿಂದ ವಿಷಯ ತಿಳಿದುಕೊಳ್ಳುವುದು ಸಮಂಜಸ ಅಲ್ಲ. ಸರ್ಕಾರ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು.
ವಿರೋಧ ಪಕ್ಷಗಳ ಸದಸ್ಯರು ಎದ್ದು ನಿಂತು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸಭಾಧ್ಯಕ್ಷರು ಸರ್ಕಾರದ ಪರವಾಗಿ ಉತ್ತರ ನೀಡುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಸೂಚನೆ ನೀಡಿದ್ದರು. ಮಧ್ಯ ಪ್ರವೇಶಿಸಿದ ಎಚ್.ಕೆ. ಪಾಟೀಲ ಸಭಾಧ್ಯಕ್ಷರ ಆಶಯದಂತೆ ಮೊದಲು ಪ್ರಶ್ನೋತ್ತರದ ಕಲಾಪ ನಡೆಯಲಿ. ಆ ಬಳಿಕ ಸರ್ಕಾರ ತನ್ನ ಉತ್ತರ ನೀಡಲಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಚರ್ಚೆ ತಾತ್ಕಾಲಿಕವಾಗಿ ಸ್ಥಗಿತಗೊಂಡು ಪ್ರಶ್ನೋತ್ತರ ಕಲಾಪದತ್ತ ಮರಳಿತು.