Friday, April 4, 2025
Homeರಾಜ್ಯನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಮತಿಗೆ ಸಿಎಂ ಮನವಿ

ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಮತಿಗೆ ಸಿಎಂ ಮನವಿ

CM appeals for permission for irrigation projects

ನವದೆಹಲಿ,ಏ.3- ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ರವರನ್ನು ಭೇಟಿ ಮಾಡಿ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರೊಂದಿಗೆ ಕೇಂದ್ರ ಸಚಿವರನ್ನು ಸಿದ್ದರಾಮಯ್ಯ ಭೇಟಿ ಮಾಡಿದರು. ಈ ವೇಳೆ ರೈಲ್ವೆ ಹಾಗೂ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.ಕರ್ನಾಟಕ ರಾಜಸ್ಥಾನ ಬಳಿಕ ಅತಿ ಹೆಚ್ಚು ಮರುಭೂಮಿಯನ್ನು ಹೊಂದಿದೆ.

ಕೃಷಿ, ಭೂ ಬಳಕೆ, ಆಹಾರೋತ್ಪಾದನೆ, ನೀರಿನ ನಿರ್ವಹಣೆ, ನಾವಿನ್ಯ ತಂತ್ರಜ್ಞಾನ ಅಳವಡಿಕೆ, ಹವಾಮಾನ ಬದಲಾವಣೆಯ ಸವಾಲುಗಳ ನಿರ್ವಹಣೆ, ಸಾಮಾಜಿಕ-ಆರ್ಥಿಕ ಬೆಳವಣಿಗೆಗಳಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕಕ್ಕೆ ಅಗತ್ಯವಾದ ನೀರಿನ ಸರಬರಾಜಿಗೆ ಆದ್ಯತೆ ನೀಡಬೇಕಿದೆ. ಕರ್ನಾಟಕ ಸರ್ಕಾರ ಈಗಾಗಲೇ ರವಾನಿಸಿರುವ ಪ್ರಸ್ತಾವನೆಗಳ ಪೈಕಿ ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳು ಬಾಕಿ ಉಳಿದಿವೆ. ಕೇಂದ್ರ ಸಚಿವರು ಮಧ್ಯಪ್ರವೇಶಿಸಿ ಇವುಗಳಿಗೆ ಅನುಮೋದನೆ ಕೊಡಿಸಬೇಕಾಗಿ ಮನವಿ ಮಾಡಿದ್ದಾರೆ.

ಪ್ರಮುಖವಾಗಿ ಮೇಕೆದಾಟು ಯೋಜನೆಯ ಬಗ್ಗೆ ಪ್ರಸ್ತಾಪಿಸಿರುವ ಮುಖ್ಯಮಂತ್ರಿಗಳು ಯೋಜನೆಯ ಆರಂಭದಿಂದ ಇತ್ತೀಚಿನವರೆಗಿನ ಬೆಳವಣಿಗೆಗಳ ಸಮಗ್ರ ಮಾಹಿತಿ ನೀಡಿದ್ದಾರೆ. ಕುಡಿಯುವ ನೀರು ಹಾಗೂ ವಿದ್ಯುತ್‌ ಉತ್ಪಾದನೆ ಈ ಯೋಜನೆಯಿಂದ ಕರ್ನಾಟಕ ಹಾಗೂ ತಮಿಳುನಾಡು ಈ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂದು ಪ್ರಸ್ತಾಪಿಸಿದ್ದಾರೆ.

ಜಲಶಕ್ತಿ ಸಚಿವರು, ಕೇಂದ್ರ ಜಲ ಆಯೋಗದ ಪ್ರಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ವಿಸ್ತೃತ ಯೋಜನಾ ವರದಿಗೆ ಮಂಜೂರಾತಿ ನೀಡುವುದು ಹಾಗೂ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಅಗತ್ಯ ನಿರಾಕ್ಷೇಪಣಾ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗಾಗಿ ಈ ಹಿಂದೆ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ಗಳ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಕೃಷ್ಣಾ ನದಿ ನೀರು ವಿವಾದದ ಕುರಿತು ಪ್ರಸ್ತಾಪಿಸಿರುವ ಮುಖ್ಯಮಂತ್ರಿಯವರು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಬೇಕು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವಿನ ನೀರಿನ ಹಂಚಿಕೆ ತಗಾದೆಗೆ ಸಂಬಂಧಪಟ್ಟಂತ ಅರ್ಜಿಯನ್ನು ಇತ್ಯರ್ಥಪಡಿಸಲು ಕೂಡಲೇ ಸುಪ್ರೀಂಕೋರ್ಟ್‌ಗೆ ಸಮರ್ಪಕ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಳಸಾ ಬಂಡೂರಿ ನಾಲಾ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ವತಿಯಿಂದ ಅಗತ್ಯ ಪೂರ್ವಾನುಮತಿ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ. ಪ್ರಮುಖವಾಗಿ ಗೋದಾವರಿ-ಕಾವೇರಿ ನದಿ ಜೋಡಣೆ, ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ನೀರು ದೊರೆಯುವಂತೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ನಡುವೆ ಹರಿಯುವ ಈ ನದಿಗಳನ್ನು ಜೋಡಣೆ ಮಾಡುವ ಪ್ರಸ್ತಾವನೆ ಚಾಲ್ತಿಯಲ್ಲಿದೆ. ಮತ್ತಷ್ಟು ಸಮಾಲೋಚನಾ ಸಭೆಗಳನ್ನು ನಡೆಸಿ ರಾಜ್ಯವಾರು ನೀರಾವರಿ ಪ್ರದೇಶಗಳಲ್ಲಿ ಭೇಟಿ ನೀಡಿ ಪುನರ್‌ ಪರಿಶೀಲನೆ ಮಾಡುವ ಮೂಲಕ ರಾಜ್ಯಕ್ಕೆ ನ್ಯಾಯೋಚಿತವಾಗಿ ನೀರಿನಲ್ಲಿ ಹೆಚ್ಚಿನ ಪಾಲು ಕೊಡಿಸುವಂತೆ ಮನವಿ ಮಾಡಿದ್ದಾರೆ.

RELATED ARTICLES

Latest News