Saturday, November 23, 2024
Homeರಾಜ್ಯಕೇಂದ್ರದಿಂದ ಅನುದಾನ ಹೆಚ್ಚಳಕ್ಕೆ ಒತ್ತಡ ಹೇರುವಂತೆ ಸಂಸದರಿಗೆ ಸಿಎಂ ಮನವಿ

ಕೇಂದ್ರದಿಂದ ಅನುದಾನ ಹೆಚ್ಚಳಕ್ಕೆ ಒತ್ತಡ ಹೇರುವಂತೆ ಸಂಸದರಿಗೆ ಸಿಎಂ ಮನವಿ

ನವದೆಹಲಿ, ಜೂ.28- ರಾಜ್ಯಕ್ಕೆ ಅನುದಾನ ಹಂಚಿಕೆ ಸಂದರ್ಭದಲ್ಲಿ 1971ರ ಜನಸಂಖ್ಯೆಯನ್ನೇ ಮಾನದಂಡ ವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಸಂಸದರಿಗೆ ಮನವಿ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಿನ್ನೆ ನಡೆದ ಸಂಸದರ ಸಭೆಯ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, 15ನೇ ಹಣಕಾಸು ಆಯೋಗ ಅನುದಾನ ಹಂಚಿಕೆಗೆ 2011ರ ಜನಸಂಖ್ಯೆ ಪರಿಗಣಿಸಿದೆ, ನಮ ರಾಜ್ಯದಲ್ಲಿ ಜನಸಂಖ್ಯೆಯನ್ನು ಸಮರ್ಥವಾಗಿ ನಿಯಂತ್ರಿಸಲಾಗಿದೆ. ಹಾಗಾಗಿ 1971ರ ಜನಗಣತಿಯನ್ನು ಪರಿಗಣಿಸುವಂತೆ ಒತ್ತಡ ಹೇರುವಂತೆ ಒತ್ತಾಯಿಸಿದ್ದೇವೆ ಎಂದು ಹೇಳಿದರು.

ರಾಜ್ಯದಿಂದ ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ನೀಡುತ್ತಿದ್ದೇವೆ. ನಮಗೆ ವಾಪಾಸ್‌‍ ಬರುವುದು ಶೇ.12ರಷ್ಟು ಮಾತ್ರ. ಇದರಲ್ಲಿ ದೊಡ್ಡ ಅನ್ಯಾಯವಾಗಿದೆ, ಸರಿ ಪಡಿಸಿ ಎಂದಿದ್ದೇವೆ. 16ನೇ ಹಣಕಾಸು ಆಯೋಗದ ಮುಂದೆ ವಾದ ಮಾಡಿ ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

15ನೇ ಹಣಕಾಸು ಆಯೋಗದಲ್ಲಿ ಎರಡು ವರದಿ ನೀಡಿದೆ. 2021ರಲ್ಲಿ ಮೊದಲ ವರದಿ ನೀಡಿದೆ. ಅದು ಆ ವರ್ಷಕ್ಕೆ ಸೀಮಿತವಾಗಿತ್ತು. 2020-21ರ ವರದಿಯಲ್ಲಿ 5495 ಕೋಟಿ ಅನುದಾನ ಕೊಡಬೇಕು ಎಂದು ಪ್ರಸ್ತಾಪಿಸಲಾಗಿತ್ತು, ಜೊತೆಗೆ ಮೀಜೋರಾಂ 546 ಕೋಟಿ, ತೆಲಂಗಾಣಕ್ಕೆ 723 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಬೇಕು ಎಂದು ಹೇಳಲಾಗಿತ್ತು. ಅದನ್ನು ಕೊಟ್ಟಿಲ್ಲ.

14ನೇ ಹಣಕಾಸು ಆಯೋಗದಲ್ಲಿ ಶೇ.4.7 ರಷ್ಟು ಅನುದಾನ ಬಂದಿದ್ದರೆ, 15ನೇ ಆಯೋಗದಲ್ಲಿ ಶೇ.3.6ರಷ್ಟು ಕಡಿಮೆಯಾಗಿದೆ. ಅದನ್ನು ನ್ನಿನೆ ಸಂಸದರ ಗಮನಕ್ಕೆ ತಂದಿದ್ದೇವೆ. ಅನುದಾನ ಹಂಚಿಕೆಯ ಮಾನದಂಡಗಳನ್ನು ಸರಿಯಾಗಿಲ್ಲ. ಸಂಸದರು ಕೇಂದ್ರ ಸರ್ಕಾರ ಹಾಗೂ ಆರ್ಥಿಕ ಇಲಾಖೆ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದ್ದೇವೆ.

ಹಿಂದಿನ ಸರ್ಕಾರದಲ್ಲೂ ಇದು ಚರ್ಚೆಯಾಗಿ, ಹಣ ಪಡೆಯಲು ಪ್ರಯತ್ನವೂ ನಡೆದಿತ್ತು. ಕೇಂದ್ರ ಸರ್ಕಾರ ಎರಡನೇ ವರದಿಯಲ್ಲಿ ವಿಶೇಷ ಅನುದಾನದ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿ ಹಣ ಕೊಟ್ಟಿಲ್ಲ. ಆದರೆ ಮೊದಲ ವರದಿಯನ್ನು ತಿರಸ್ಕರಿಸಿಲ್ಲ. ಜೊತೆಗೆ ಎರಡನೇ ವರದಿಯಲ್ಲಿ ಫೆರಿಫರಲ್‌ ರಿಂಗ್‌ ರಸ್ತೆ ಹಾಗೂ ಬೆಂಗಳೂರಿನ ಅಂತರ್ಜಲ ವೃದ್ಧಿಗಾಗಿ ಕೆರೆ ಅಭಿವೃದ್ಧಿಗೆ ತಲಾ ಮೂರು ಸಾವಿರದಂತೆ ಒಟ್ಟು ಆರು ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು.

ಕೊಟ್ಟಿಲ್ಲ. ಅದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜಕೀಯ ವಾಗಿ ಹೇಳಿಕೆ ನೀಡಿ ಜಾರಿಕೊಳ್ಳುತ್ತಿದ್ದಾರೆ. ಎಲ್ಲಾ ಸೇರಿ ಒಟ್ಟು 11,495 ಹಣ ಬಾಕಿ ಇದೆ. ಇದಕ್ಕೆ ಒತ್ತಡ ಹೇರಲು ಸಂಸದರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಮೇಟ್ರೋ ಮೂರನೇ ಹಂತದ 15600 ಕೋಟಿ ರೂಪಾಯಿ ಯೋಜನೆ ಮಂಜೂರು ಮಾಡಿಸಬೇಕು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಜ್ಯಕ್ಕೆ 700 ಕೋಟಿ ಬರಬೇಕಿದೆ. ರಾಯಚೂರಿನಲ್ಲಿ ಏಮ್ಸೌ ಸ್ಥಾಪನೆಗೆ ಮನವಿ ಮಾಡಿದ್ದೇವೆ. ಎನ್‌ಡಿಆರ್‌ಎಫ್‌ ಅಡಿ ಪರಿಹಾರ ನೀಡುವ ಪ್ರಮಾಣವನ್ನು ಪರಿಷ್ಕರಣೆ ಮಾಡಲು ಒತ್ತಾಯಸಿದ್ದೇವೆ. ದೇಶದಲ್ಲಿ 12 ರಾಜ್ಯಗಳು ಹೆಚ್ಚು ಬರಕ್ಕೆ ತುತ್ತಾಗುತ್ತವೆ. ಅದರಲ್ಲಿ ಕರ್ನಾಟಕವೂ ಪ್ರಮುಖವಾಗಿದ್ದು, ಹೆಚ್ಚಿನ ಪರಿಹಾರ ಮತ್ತು ಇನ್‌ಪುಟ್‌ ಸಬ್ಸಿಡಿ ಪ್ರಮಾಣ ಹೆಚ್ಚಿಸಬೇಕು ಎಂದು ಮನವಿ ಮಾಡಿರುವುದಾಗಿ ವಿವರಿಸಿದರು.

ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸಬೇಕು. ವರದಿಯಿಂದ ರೈತರಿಗೆ ಹಾಗೂ ಅರಣ್ಯ ಪ್ರದೇಶದಲ್ಲಿ ವಾಸಿಸುವರಿಗೆ ಅನುಕೂಲವಾಗುವುದಿಲ್ಲ ಎಂದು ಹೇಳಿದ್ದೇವೆ. ಈ ವಿಚಾರ ನ್ಯಾಯಾಲಯದಲ್ಲಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಜನರ ಅಭಿಪ್ರಾಯವನ್ನು ನಾವು ವಿವರಸಿದ್ದೇವೆ ಎಂದು ತಿಳಿಸಿದರು.

ರೈಲ್ವೆ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇವೆ. ರೈಲ್ವೆಯಿಂದ ಬರುವ ಆದಾಯ ಸಂಪೂರ್ಣ ಕೇಂದ್ರ ಸರ್ಕಾರದ್ದಾಗಿದೆ, ಆದರೂ ರಾಜ್ಯದಲ್ಲಿ ಹೆಚ್ಚು ರೈಲ್ವೆ ಮಾರ್ಗಗಳಾಲಿ ಎಂದು ಜಾಗ ನೀಡುತ್ತಿದೆ. ಎಸ್‌‍.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ವೆಚ್ಚದಲ್ಲಿ ಶೇಕಡವಾರು ಭರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗ ಆ ಪ್ರಮಾಣ ಶೇ.50ರಷ್ಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸಿ ಮತ್ತಷ್ಟು ಯೋಜನೆಗಳನ್ನು ಆರಂಭಿಸಲು ಒತ್ತಾಯಿಸಿದ್ದೇವೆ ಎಂದರು.

ಗ್ರಾಮ ಸಡಕ್‌ ಯೋಜನೆಯ ರಸ್ತೆಗಳು ಬೇರೆ ರಾಜ್ಯಕ್ಕೆ ಹೊಲಿಸಿದರೆ ನಮಲ್ಲಿ ಕಡಿಮೆ ಇವೆ. ಇಂದು ಕೇಂದ್ರ ಸಚಿವ ನಿತೀನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ವಿವರಿಸುತ್ತೇನೆ.
ಅಲ್ಪಸಂಖ್ಯಾತರಿ ಅಭಿವೃದ್ಧಿಗೆ 659 ಕೋಟಿ ರೂಪಾಯಿ ವೆಚ್ಚದಲ್ಲಿ 52 ಯೋಜನೆಗಳನ್ನು ಮಾಡಲಾಗಿದೆ, ಬುಡಕಟ್ಟು ಜನರ ಅಭಿವೃದ್ಧಿಗೆ ಅನುದಾನ ಕೊಡಿಸಲು ಪ್ರಸ್ತಾಪಿಸಲಾಗಿದೆ. ಕೆಲವು ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಅನುಮತಿ ನೀಡುವಂತೆ ಕೇಳಿದ್ದೇವೆ.

ಮೀನುಗಾರಿಕೆ ಇಲಾಖೆಯಡಿ ಉತ್ತರ ಕನ್ನಡ ಜಿಲ್ಲೆಯ ಮಾಜಳ್ಳಿಯಲ್ಲ ಹೊಸ ಬಂದರು ಮಾಡಬೇಕು, ಮಂಗಳೂರಿನಲ್ಲಿರುವ ಮೀನುಗಾರಿಗೆ ಬಂದರು ವಿಸ್ತರಣೆ ಮಾಡಲು 2023ರಿಂದ ಬೇಡಿಕೆ ಸಲ್ಲಿಸಿದ್ದೇವೆ. ಅದಕ್ಕೆ ಮಂಜೂರಾತಿ ಕೊಡಿಸಲು ಕೇಳಿಕೊಂಡಿದ್ದೇವೆ.

ಬಾಕಿ ಯೋಜನೆಗಳ ಸಂಪೂರ್ಣ ವಿವರಣೆಯ ಕಿರು ಹೊತ್ತಿಗೆಯನ್ನು ಸಂಸದರಿಗೆ ನೀಡಿದ್ದೇವೆ. ಚುನಾವಣೆ ಮುಗಿದೆ. ಇಂದು ನಡೆಯುತ್ತಿರುವ ಸಭೆ ವಿಧಾನಮಂಡಲ ಅಥವಾ ಸಂಸತ್‌ ಅಧಿವೇಶನ ಅಲ್ಲ. ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದೇನೆ ಎಂದು ವಿವರಿಸಿದರು.

RELATED ARTICLES

Latest News