ಬೆಂಗಳೂರು, ಫೆ.17- ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ತಯಾರಿಗಾಗಿ ಅಧಿಕಾರಿಗಳ ಸರಣಿ ಸಭೆಗಳ ಬಳಿಕ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರೊಂದಿಗಿನ ಚರ್ಚೆಗೆ ಮುಂದಾಗಿದ್ದಾರೆ. ಇಂದು ರೈತ ಸಂಘದ ವಿವಿಧ ಸಂಘಟನೆಗಳ ಜೊತೆ ವಿಧಾನಸೌಧದಲ್ಲಿ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದರು.
ಆರಂಭದಲ್ಲೇ ಮಾತನಾಡಿದ ಮುಖ್ಯಮಂತ್ರಿಯವರು, ರೈತರ ಬೇಡಿಕೆಗಳಿಗೆ ನಮ್ಮ ಸರ್ಕಾರ ನಿರಂತರವಾಗಿ ಸ್ಪಂದಿಸುತ್ತಿದೆ. ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುತ್ತಲೇ ಇದ್ದೇವೆ ಎಂದು ತಿಳಿಸಿದರು.
ಕೃಷಿ ಅತಿ ಹೆಚ್ಚು ಉದ್ಯೋಗ ಅವಲಂಬನೆ ಇರುವ ಕ್ಷೇತ್ರ. ಹೀಗಾಗಿ ರೈತರ ಬೇಡಿಕೆಗಳಿಗೆ ಸ್ಪಂದಿಸುವುದು ನಮ್ಮ ಪ್ರಥಮ ಆದ್ಯತೆ. ತಾವೂ ಕೂಡ ರೈತ ಕುಟುಂಬದಿಂದಲೇ ಬಂದಿರುವುದರಿಂದ ಅವರ ಸಮಸ್ಯೆಗಳ ಅರಿವಿದೆ ಎಂದು ಹೇಳಿದರು.
ಸಭೆಯ ಪ್ರಾರಂಭಕ್ಕೂ ಮುನ್ನ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್‌ಗಳ ಬಲವಂತದ ವಸೂಲಿಗೆ ಕಡಿವಾಣ ಹಾಕಿದ್ದಕ್ಕಾಗಿ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರವನ್ನು ಒಕ್ಕೊರಲಿನಿಂದ ಅಭಿನಂದಿಸಿದರು.
ಕಾಲುನೋವಿನಿಂದಾಗಿ ಈವರೆಗೂ ಗೃಹಕಚೇರಿ ಕಾವೇರಿಯಲ್ಲೇ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿಯವರು ಇಂದು ವೀಲ್ ಚೇರ್‌ನಲ್ಲಿ ವಿಧಾನಸೌಧಕ್ಕೆ ಆಗಮಿಸಿ ರೈತ ಸಂಘಟನೆಗಳ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಮುಖ್ಯಮಂತ್ರಿಯವರ ಸಲಹೆಗಾರ ಬಿ.ಆರ್.ಪಾಟೀಲ್, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.