ದಾವಣಗೆರೆ, ಜ.5- ರಾಜ್ಯದಲ್ಲಿ ಶೇ.60ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅದನ್ನು ಸಾಬೀತು ಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ನಾಯಕರು ದಾಖಲೆಗಳು ಇಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಭ್ರಷ್ಟಚಾರ ಹಾಗೂ ಶೇ.60ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದಾದರೆ ಅದನ್ನು ದಾಖಲೆಗಳ ಸಹಿತ ಸಾಬೀತು ಪಡಿಸಬೇಕು. ದಾಖಲೆ ಇಲ್ಲದೆ ಬಾಯಿ ಮಾತಿಗೆ ಆರೋಪ ಮಾಡುವುದು ಸರಿಯಲ್ಲ ಎಂದರು.ಮಾರ್ಚ್ ತಿಂಗಳಿನಲ್ಲಿ ತಾವು ರಾಜ್ಯ ಬಜೆಟ್ ಮಂಡಿಸಲಿದ್ದು, ಅದರ ತಯಾರಿಗಾಗಿ ಪೂರ್ವಭಾವಿ ಚರ್ಚೆ ಆರಂಭಿಸಿದ ಬಳಿಕ, ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡುವುದಾಗಿ ತಿಳಿಸಿದರು.
ಸಾರಿಗೆ ನಿಗಮಗಳ ಪ್ರಯಾಣ ದರ ಹೆಚ್ಚಳ ಎಲ್ಲ ಕಾಲಕ್ಕೂ ನಡೆದಿದೆ. ಹಣದುಬ್ಬರ, ಇಂಧನ ಬೆಲೆ, ಬಸ್ ಖರೀದಿ ದರ ಹಾಗೂ ಸಿಬ್ಬಂದಿಗಳ ವೇತನ ಹೆಚ್ಚಳ ಸೇರಿ ವಿವಿಧ ಕಾರಣಗಳಿಗೆ ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತಿದೆ. 2015ರಲ್ಲಿ ದರ ಪರಿಷ್ಕರಣೆಯಾಗಿತ್ತು. ಸಾರಿಗೆ ನಿಗಮಗಳು ಸಂಕಷ್ಟದಲ್ಲಿವೆ ಎಂಬ ಕಾರಣಕ್ಕೆ ದರ ಪರಿಷ್ಕರಣೆಗೆ ಬಹಳ ದಿನಗಳ ಬೇಡಿಕೆ ಇತ್ತು ಎಂದು ಸಮರ್ಥಿಸಿಕೊಂಡರು.
ರಾಜ್ಯ ಸರ್ಕಾರ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ ಎಂದು ಟೀಕಿಸುವ ಬಿಜೆಪಿ, ಜೆಡಿಎಸ್ ಕಾಲದಲ್ಲಿ ಪ್ರಯಾಣ ದರ ಹೆಚ್ಚಿಸಿರಲಿಲ್ಲವೇ ? ಅಷ್ಟೇ ಏಕೆ ಕೇಂದ್ರ ಸರ್ಕಾರ ರೈಲ್ವೆ ದರವನ್ನು ಹೆಚ್ಚಿಸಿರಲಿಲ್ಲವೇ ಎಂದು ತಿರುಗೇಟು ನೀಡಿದರು.ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ರಾಜ್ಯದ ನಾಯಕರ ಹಂತದಲ್ಲಿ ಯಾವುದೇ ನಿರ್ಧಾರವಾಗುವುದಿಲ್ಲ ಎಂದರು.
ಬಿ.ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ನೇಮಕ ಮಾಡುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತಯಾರಾಗಿದೆ. ಆದರೆ ಮೀಸಲಾತಿ ಕುರಿತು ನ್ಯಾಯಾಲಯದ ಮುಂದೆ ವಿಚಾರಣೆ ಬಾಕಿ ಇದೆ. ನ್ಯಾಯಾಲಯದ ಆದೇಶ ಹೊರ ಬಿದ್ದ ತಕ್ಷಣವೇ ಚುನಾವಣೆಗೆ ತಯಾರಿ ನಡೆಸಲಾಗುವುದು ಎಂದು ಸ್ಪಷ್ಟ ಪಡಿಸಿದರು. ಚುನಾವಣೆ ನಿಂತಿದ್ದು, ಯಾರ ಕಾಲದಲ್ಲಿ ಎಂದು ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಪ್ರಶ್ನಿಸಿದರು.
ಒಳ ಮೀಸಲಾತಿ ಬಗ್ಗೆ ಅಧ್ಯಯನ ನಡೆಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ಕಲ್ಪಿಸಲು ಸಮರ್ಥನೀಯ ಅಂಕಿಅಂಶಗಳು ಲಭ್ಯ ಇಲ್ಲ ಎಂಬ ಆಕ್ಷೇಪ ಇರುವ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ. ನಮ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಲು ಬದ್ಧವಾಗಿದೆ ಎಂದರು.
ಬೆಂಗಳೂರಿನಲ್ಲಿ ಸಚಿವರೊಂದಿಗೆ ಊಟಕ್ಕೆ ಸಭೆ ಸೇರಿದ ಬಗ್ಗೆ ಕುರಿತು ಪ್ರಶ್ನಿಸಿದ ಅವರು, ಊಟಕ್ಕೆ ಸೇರುವುದು ತಪ್ಪಾ. ನಾಲ್ಕೈದು ಮಂದಿ ಊಟಕ್ಕೆ ಸೇರುವುದು ಸಹಜವಲ್ಲವೇ. ರಾಜಕಾರಣಿಗಳು ಜೊತೆಯಾಗಿ ಊಟ ಮಾಡಿದರೆ ಅದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವುದು ಸರಿಯಲ್ಲ ಎಂದರು.
ಕೆಲವರು ನಾನ್ ವೆಜ್ ಊಟ ಮಾಡುತ್ತಾರೆ, ಇನ್ನೂ ಕೆಲವರು ವೆಜ್ ಊಟ ಮಾಡುತ್ತಾರೆ. ಅದೇ ರೀತಿ ನಾವು ಸೇರಿದ್ದೇವು. ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಪುನರುಚ್ಚರಿಸಿದರು.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮೇಳನಕ್ಕೆ ಈ ಮೊದಲು ನಿಗದಿಯಾಗಿದ್ದ ದಿನಾಂಕ ಮುಂದೂಡಿಕೆಯಾಗಿರುವ ಕುರಿತು ಮಾಹಿತಿ ಇಲ್ಲ, ಮರು ದಿನಾಂಕ ನಿಗದಿ ಸಂಬಂಧಿಸಿಂತೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.ಹರಿಹರದ ಗುತ್ತಿಗೆದಾರರು ದಯಾಮರಣ ಅರ್ಜಿ ಸಲ್ಲಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು.