ಬೆಂಗಳೂರು, ಮೇ 8- ಲೋಕಸಭೆ ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಸಂಪುಟದ ಬಹುತೇಕ ಸಚಿವರು ವಿಶ್ರಾಂತಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರು ಊಟಿಗೆ ತೆರಳಿದ್ದರು. ಮೂರು ದಿನಗಳಿಂದ ಅಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇತ್ತ ಡಿ.ಕೆ.ಶಿವಕುಮಾರ್ ಅವರು ಚಿಕ್ಕಮಗಳೂರಿನಲ್ಲಿ ತಮ್ಮ ಅಳಿಯ ಅವರ ಮನೆಗೆ ಕುಟುಂಬ ಸಮೇತರಾಗಿ ತೆರಳಿ ವಿಶ್ರಾಂತಿ ಪಡೆದರು.
ಪೆನ್‌ಡ್ರೈವ್ ಪ್ರಕರಣ ಕಾವೇರಿದ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ವಿಶ್ರಾಂತಿಗೆ ತೆರಳಿರುವುದು ಅಚ್ಚರಿಗೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ಇಂದು ಹೆಲಿಕಾಫ್ಟರ್‌ನಲ್ಲಿ ಪತ್ನಿ, ಮಕ್ಕಳು ಹಾಗೂ ಅಳಿಯನ ಸಮೇತ ಪ್ರವಾಸಕ್ಕೆ ತೆರಳಿದರು. ಜೆಡಿಎಸ್ ಕಾರ್ಯಕರ್ತರು ಹಲವು ಕಡೆ ಪ್ರತಿಭಟನೆ ನಡೆಸುತ್ತಿರುವುದರಿಂದ ಚಿಕ್ಕಮಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು.
ಸಂಪುಟದ ಹಲವು ಸಚಿವರು ಕುಟುಂಬ ಸಮೇತರಾಗಿ ಪ್ರವಾಸಿ ತಾಣಗಳಿಗೆ ತೆರಳಿ ವಿಶ್ರಾಂತಿ ಪಡೆದುಕೊಂಡರು. ನಿನ್ನೆ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದ 14 ಕ್ಷೇತ್ರಗಳಿಗೆ ನಿನ್ನೆಯಷ್ಟೆ ಮತದಾನ ಮುಗಿದಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ನಿರಂತರವಾಗಿ ಪ್ರಚಾರ ನಡೆಸಿ ಮುಖಂಡರು ಧಣಿದಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭ್ಯರ್ಥಿ ಕಡೆಯಿಂದಲೇ ಪ್ರವಾಸ ಕೊಡುಗೆ ದೊರೆತಿದೆ. ಬಹಳಷ್ಟು ಮಂದಿ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.