Thursday, July 4, 2024
Homeರಾಜ್ಯಬಿಬಿಎಂಪಿ ಚುನಾವಣೆ ಮೇಲೆ ಸಿಎಂ-ಡಿಸಿಎಂ ಕಣ್ಣು, ಶಾಸಕರ ಜೊತೆ ಸಮಾಲೋಚನೆ

ಬಿಬಿಎಂಪಿ ಚುನಾವಣೆ ಮೇಲೆ ಸಿಎಂ-ಡಿಸಿಎಂ ಕಣ್ಣು, ಶಾಸಕರ ಜೊತೆ ಸಮಾಲೋಚನೆ

ಬೆಂಗಳೂರು,ಜೂ.10- ಲೋಕಸಭೆ, ವಿಧಾನಪರಿಷತ್‌ ಸೇರಿದಂತೆ ಎಲ್ಲಾ ಚುನಾವಣೆಗಳನ್ನೂ ಮುಗಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದು ಇಂದು ಪಕ್ಷದ ಶಾಸಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

ಸಂಜೆ ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಬೆಂಗಳೂರಿನ ವ್ಯಾಪ್ತಿಯ 3 ಲೋಕಸಭಾ ಕ್ಷೇತ್ರಗಳಲ್ಲಿನ ಸೋಲಿನ ಬಗ್ಗೆಯೂ ಪರಾಮರ್ಶೆ ನಡೆಯಲಿದೆ. ಈ ಬಾರಿ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌‍ ಗೆಲ್ಲುವ ವಿಶ್ವಾಸವಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದ ಮತದಾರರು ಕಾಂಗ್ರೆಸ್‌‍ ಪಕ್ಷವನ್ನು ಬೆಂಬಲಿಸಿದರು. ಆದರೆ ಈಗ ಲೋಕಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲಲು ಸಾಧ್ಯವಾಗದೇ ಇರುವುದು ಏಕೆ? ಎಂಬ ಪ್ರಶ್ನೆ ಕಾಂಗ್ರೆಸ್‌‍ ಅನ್ನು ಕಾಡುತ್ತಿದೆ. ಹೀಗಾಗಿ ಸೋಲಿನ ಕಾರಣಗಳ ಬಗ್ಗೆ ಪಕ್ಷದ ಶಾಸಕರ ಜೊತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಮಾಲೋಚನೆ ನಡೆಸಲಿದ್ದಾರೆ.

ಇತ್ತೀಚೆಗೆ ಬೇಸಿಗೆಯ ಕಾರಣಕ್ಕೆ ಕುಡಿಯುವ ನೀರಿನ ಅಭಾವವನ್ನು ನಗರದ ಜನತೆ ಎದುರಿಸಿದರು. ಅದರ ಬೆನ್ನಲ್ಲೇ ಮುಂಗಾರು ಮಳೆ ಚುರುಕುಗೊಂಡಿದ್ದು, ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾದರೂ ನಗರ ಜಲಾವೃತಗೊಳ್ಳುತ್ತಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ, ರಸ್ತೆಗಳಲ್ಲಿ, ಸೇತುವೆಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ತೆಗೆದುಕೊಳ್ಳಬೇಕಾದ ಶಾಶ್ವತ ಪರಿಹಾರದ ಕಾರ್ಯಗಳ ಬಗ್ಗೆಯೂ ಪಕ್ಷದ ಶಾಸಕರೊಂದಿಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ 5 ವರ್ಷಗಳಿಂದಲೂ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಲ್ಲದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಸಾರ್ವಜನಿಕ ವಲಯದಿಂದ ತೀವ್ರ ಒತ್ತಡ ಕೇಳಿಬರುತ್ತಿದೆ.ಮುಖ್ಯಮಂತ್ರಿಯವರು ಚುನಾವಣೆ ನಡೆಸಬೇಕು ಎಂಬ ಉಮೇದಿನಲ್ಲಿದ್ದಾರೆ. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸುಪ್ರೀಂಕೋರ್ಟ್‌ ನಿರ್ಬಂಧ ವಿಧಿಸಿರುವುದರಿಂದ ಚುನಾವಣಾ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ.

ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಬದಿಗಿರಿಸಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿಲ್ಲ. ಮೀಸಲಾತಿಯ ಮರು ಅನುಷ್ಠಾನದ ಅಧ್ಯಯನಕ್ಕಾಗಿ ಸಮಿತಿ ರಚಿಸಲಾಗಿದೆ.ಈ ಎಲ್ಲಾ ಅಂಶಗಳನ್ನೂ ಪರಿಗಣಿಸಿ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂಬ ಚರ್ಚೆ ನಡೆಯುತ್ತಿದೆ.

RELATED ARTICLES

Latest News