Wednesday, July 9, 2025
Homeರಾಜ್ಯಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರದ ದ್ವೇಷ-ತಾರತಮ್ಯ ನೀತಿ ವಿರುದ್ಧ ಸಿಎಂ, ಡಿಸಿಎಂ ಹೋರಾಟ : ಸುರ್ಜೇವಾಲ

ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರದ ದ್ವೇಷ-ತಾರತಮ್ಯ ನೀತಿ ವಿರುದ್ಧ ಸಿಎಂ, ಡಿಸಿಎಂ ಹೋರಾಟ : ಸುರ್ಜೇವಾಲ

CM, DCM fight against central government's hate-discrimination policy in Karnataka

ಬೆಂಗಳೂರು,ಜು.9– ಕೇಂದ್ರ ಸರ್ಕಾರ ಕರ್ನಾಟಕದ ವಿಷಯದಲ್ಲಿ ದ್ವೇಷ ಹಾಗೂ ಉದ್ದೇಶಪೂರ್ವಕ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದರ ವಿರುದ್ಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ತಮ ಹೋರಾಟವನ್ನು ಮುಂದುವರೆಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜನ ಕಾಂಗ್ರೆಸ್‌‍ ಪಕ್ಷಕ್ಕೆ ಮತ ಹಾಕಿದ ಬಳಿಕ ಕೇಂದ್ರ ಸರ್ಕಾರ ಕರ್ನಾಟಕದ ವಿಷಯದಲ್ಲಿ ನಿರಂತರವಾದ ತಾರತಮ್ಯವನ್ನು ಅನುಸರಿಸುತ್ತಿದೆ.

ಕಳಸಾ ಬಂಡೂರಿ, ಮೇಕೆದಾಟು ಯೋಜನೆಗಳಿಗೆ ಅನುಮೋದನೆ ನೀಡಿಲ್ಲ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿದೆ. ಜಿಎಸ್‌‍ಟಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದ್ದು, ಹಣಕಾಸು ಆಯೋಗದ ಶಿಫಾರಸು ಆಧರಿಸಿ ರಾಜ್ಯದ ಪಾಲಿನ ಹಣ ನೀಡಲು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಹೊರತಾಗಿ ರಾಜಕೀಯ ಸಭೆಗಳು ಹಾಗೂ ಚರ್ಚೆ ನಡೆಯುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಭಾರತ್‌ ಬಂದ್‌ :
ದೇಶದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದು, ಕಾರ್ಮಿಕರು, ದುಡಿಯುವ ವರ್ಗ ನಿರುದ್ಯೋಗದಿಂದ ಬಳಲುತ್ತಿದ್ದರೆ ಜನಸಾಮಾನ್ಯರು ಹಣದುಬ್ಬರದಿಂದ ತತ್ತರಿಸಿದ್ದಾರೆ. ಇದರ ವಿರುದ್ಧ ದೇಶಾದ್ಯಂತ ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಭಾರತ್‌ ಬಂದ್‌ಗೆ ಕರೆ ನೀಡಿವೆ ಎಂದು ಸುರ್ಜೇವಾಲ ತಿಳಿಸಿದರು.

45 ವರ್ಷಗಳ ಹಿಂದೆ ಅತ್ಯಧಿಕವಾದಂತಹ ನಿರುದ್ಯೋಗ ದೇಶವನ್ನು ಕಾಡುತ್ತಿದೆ. ಮನ್ರೇಗಾ ಯೋಜನೆಗೆ 86 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಅದರಲ್ಲಿ 10 ಸಾವಿರ ಕೋಟಿ ಬಾಕಿ ಪಾವತಿಗೆ ವೆಚ್ಚವಾಗಿದೆ. ನೂರು ದಿನದ ಬದಲು 46 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಮನ್ರೇಗಾದಲ್ಲಿ ಆಧಾರ್‌ ಜೋಡಣೆ ಮಾಡಿ ನೋಂದಣಿ ಆಗಿರುವವರ ಪೈಕಿ 7 ಕೋಟಿ ಜನ ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

ಸಮಾನತೆ ದೇಶದ ದೊಡ್ಡ ಸವಾಲಾಗಿದೆ. ಶೇ.10 ರಷ್ಟು ಜನರ ಲ್ಲಿ ದೇಶದ ಶೇ.70 ರಷ್ಟು ಆಸ್ತಿ ಇದ್ದರೆ, ಬಾಕಿ ಇರುವ ಶೇ.15 ರಷ್ಟು ಜನ ಕೇವಲ ಶೇ.10 ರಷ್ಟು ಆಸ್ತಿಯನ್ನು ಮಾತ್ರ ಹೊಂದಿದ್ದಾರೆ. ಇದು ಭಾರತ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ.

ಜಾಗತಿಕವಾಗಿ ಬಡತನದಲ್ಲಿ ಭಾರತ 50ನೇ ಸ್ಥಾನದಲ್ಲಿದೆ. ಬಾಂಗ್ಲಾ ದೇಶ, ಕೀನ್ಹಾ, ಕಾಂಬೋಡಿಯಾ ತಲಾ ಆದಾಯದಲ್ಲಿ ನಮಗಿಂತಲೂ ಉತ್ತಮ ಸ್ಥಿತಿಯಲ್ಲಿವೆ. ಆ ದೇಶಗಳ ತಲಾದಾಯ 14 ಸಾವಿರ ಡಾಲರ್‌ ಆದರೆ, ಭಾರತೀಯರ ತಲಾದಾಯ 2900 ಡಾಲರ್‌ಗಳಾಗಿದೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 125 ದೇಶಗಳ ಪೈಕಿ ಭಾರತ 111 ನೇ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 195 ದೇಶಗಳ ಪೈಕಿ 134 ನೇ ಸ್ಥಾನ, ಲಿಂಗತಾರತಮ್ಯದಲ್ಲಿ 146ನೇ ಸ್ಥಾನದ ಪೈಕಿ 127 ನೇ ಸ್ಥಾನದಲ್ಲಿ, ಜೀವನ ಮಟ್ಟದಲ್ಲಿ 123 ರ ಪೈಕಿ 121ನೇ ಸ್ಥಾನ, ಪತ್ರಿಕಾ ಸ್ವಾತಂತ್ರ್ಯದಲ್ಲಿ 181 ದೇಶಗಳ ಪೈಕಿ 159ನೇ ಸ್ಥಾನದಲ್ಲಿ ಭಾರತ ಇದೆ ಎಂದು ಸುರ್ಜೇವಾಲ ವಿವರಿಸಿದರು.

ಆರ್ಥಿಕವಾಗಿ ದೇಶ ಸಂಕಷ್ಟಕ್ಕೆ ಸಿಲುಕಿದೆ. ಮೋಟಾರ್‌ ಸೈಕಲ್‌, ಸ್ಕೂಟರ್‌ಗಳ ಮಾರಾಟ ಕುಸಿದಿದೆ. ಜವಳಿ ಉದ್ಯಮ ನಷ್ಟಕ್ಕೊಳಗಾಗಿದ್ದು, ತಮಿಳುನಾಡಿನ ತಿರಸೂರ್‌, ಗುಜರಾತ್‌ನ ಸೂರತ್‌, ಹರಿಯಾಣದ ಪಾಳಿಪಟ್‌ನ ಜವಳಿ ವಲಯಗಳಲ್ಲಿ ಶೇ.30 ರಷ್ಟು ಉತ್ಪಾದನೆ ಕುಸಿದಿದೆ. ರಿಯಲ್‌ ಎಸ್ಟೇಟ್‌ ನಷ್ಟಕ್ಕೊಳಗಾಗಿದೆ.

ಕೈಗಾರಿಕಾ ಸಂಸ್ಥೆಗಳ ಒಕ್ಕೂಟವೇ ನಡೆಸಿರುವ ಸಮೀಕ್ಷೆ ಪ್ರಕಾರ, ಹಣದುಬ್ಬರ ಶೇ.5.7 ರಷ್ಟಿದ್ದು, ಶೇ.0.8 ರಷ್ಟು ವೇತನ ಹೆಚ್ಚಳ ಮಾಡುವುದರಿಂದ ಜನರಿಗೆ ಯಾವುದೇ ಲಾಭವಿಲ್ಲ ಎಂದಿದೆ ಎಂದು ವಿವರಿಸಿದ್ದಾರೆ.

ದೇಶದಲ್ಲಿ ಶೇ.80 ರಷ್ಟು ಅಸಂಘಟಿತ ಕಾರ್ಮಿಕ ವರ್ಗವಿದ್ದು, ಅವರಲ್ಲಿ ಶೇ.60 ರಷ್ಟು ಜನ ಯಾವುದೇ ಲಿಖಿತ ಒಪ್ಪಂದಗಳಿಲ್ಲದೆ ಶೇ.53 ರಷ್ಟು ಜನ ಪಿಂಚಣಿ ವಿಮೆಯಂತಹ ಸಾಮಾಜಿಕ ಭದ್ರತೆ ಇಲ್ಲದೆ ದುಡಿಮೆ ಮಾಡುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನೂ ಕೇಂದ್ರ ಸರ್ಕಾರದ ಗಮನಕ್ಕೆ ತರಲು ಭಾರತ್‌ ಬಂದ್‌ ನಡೆಸಲಾಗುತ್ತಿದೆ. ಸರ್ಕಾರದಲ್ಲಿ 3 ಲಕ್ಷ ಉದ್ಯೋಗಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

RELATED ARTICLES

Latest News