Sunday, June 30, 2024
Homeರಾಜ್ಯನಾಳೆ ದೆಹಲಿಗೆ ಹಾರಲಿದ್ದಾರೆ ಸಿಎಂ, ಡಿಸಿಎಂ : ಪರಿಷತ್‌ನ ಅಭ್ಯರ್ಥಿಗಳ ಆಯ್ಕೆ ಕುರಿತು ಹೈಕಮಾಂಡ್‌ ಜೊತೆ...

ನಾಳೆ ದೆಹಲಿಗೆ ಹಾರಲಿದ್ದಾರೆ ಸಿಎಂ, ಡಿಸಿಎಂ : ಪರಿಷತ್‌ನ ಅಭ್ಯರ್ಥಿಗಳ ಆಯ್ಕೆ ಕುರಿತು ಹೈಕಮಾಂಡ್‌ ಜೊತೆ ಚರ್ಚೆ

ಬೆಂಗಳೂರು, ಮೇ 27- ವಿಧಾನಪರಿಷತ್‌ನ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪೈಪೋಟಿ ತೀವ್ರಗೊಂಡಿದ್ದು, ಹೈಕಮಾಂಡ್‌ ಜೊತೆ ಚರ್ಚಿಸಲು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳುತ್ತಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

7 ಸ್ಥಾನಗಳ ಪೈಕಿ ಸಚಿವ ಎನ್‌.ಎಸ್‌‍.ಬೋಸ್‌‍ರಾಜ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಹಾಲಿ ಸದಸ್ಯ ಕೆ.ಗೋವಿಂದರಾಜು ಸೇರಿದಂತೆ ಮೂರು ಮಂದಿಗೆ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಬಾಕಿ ಇರುವ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸಿಗರು ತಲೆಕೆಡಿಸಿಕೊಂಡಿದ್ದಾರೆ.

ನಿನ್ನೆ ರಜೆ ದಿನವಾದ್ದರಿಂದ ಆಕಾಂಕ್ಷಿಗಳ ದಂಡು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಿವಾಸದ ಎದುರು ಜಮಾಯಿಸಿತ್ತು. ಇಂದು ಬೆಳಿಗ್ಗೆ ಕೂಡ ನೂರಾರು ಮಂದಿ ಪ್ರಮುಖ ನಾಯಕರುಗಳ ಮನೆಮುಂದೆ ಭೇಟಿ ಮಾಡಲು ಬೆಂಬಲಿಗರೊಂದಿಗೆ ಆಗಮಿಸಿದ್ದರು.

ಕುಮಾರಕೃಪ ಅತಿಥಿಗೃಹದಲ್ಲಿ ಕಾಂಗ್ರೆಸಿಗರು ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಹರಿದಾಡಿದ್ದು, ಅಲ್ಲಿಗೆ ನೂರಾರು ಮಂದಿ ನಾಯಕರು ಆಗಮಿಸಿದ್ದು ಕಂಡುಬಂದಿತು.ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣ, ಅಧಿಕೃತ ನಿವಾಸ ಕಾವೇರಿ ಈ ಎರಡೂ ಕಡೆಗಳಲ್ಲೂ ಜನ ಸಾಲುಗಟ್ಟಿ ನಿಂತಿದ್ದರು. ತೀವ್ರ ಪೈಪೋಟಿಯ ನಡುವೆ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಸಂಜೆ ಸಭೆ :
ವಿಧಾನಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರಗಳಿಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆ ತಯಾರಿಗೆ ಸಂಬಂಧಪಟ್ಟಂತೆ ಇಂದು ಸಂಜೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವರ್ಚ್ಯುಯಲ್‌ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ಸಚಿವರು, ಶಾಸಕರು, ಸಂಸದರು, ಉಸ್ತುವಾರಿ ಪದಾಧಿಕಾರಿಗಳು 2023 ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು ಮುಂಚೂಣಿ ಘಟಕದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಹಾಗೂ ಚುನಾವಣೆಗೆ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಲಾಗುತ್ತಿದೆ.

ಬೆಂಗಳೂರು ಪದವೀಧರರು, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರ, ಈಶಾನ್ಯ ಪದವೀಧರರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರಗಳಿಗೆ ಹಂತಹಂತವಾಗಿ ಸಭೆ ನಡೆಯಲಿದೆ.

RELATED ARTICLES

Latest News