ಬೆಂಗಳೂರು,ಫೆ.7- ಲೋಕಾಯುಕ್ತ ಅಂತಿಮ ವರದಿ ಬಂದ ನಂತರ ಮುಡಾ ಪ್ರಕರಣದ ಅಂತಿಮ ಚಿತ್ರಣ ಸಿಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್ ನಿರಾಕರಿಸಿರುವುದು ಮುಖ್ಯಮಂತ್ರಿಗೆ ಕ್ಲೀನ್ಚಿಟ್ ನೀಡಿದಂತಲ್ಲ ಎಂದು ತಿಳಿಸಿದರು. ಲೋಕಾಯುಕ್ತ ತನಿಖಾಧಿಕಾರಿಗಳು ಅಂತಿಮ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲು ನ್ಯಾಯಾಲಯ ಸೂಚನೆ ಕೊಟ್ಟಿದೆ.
ಈಗ ಪ್ರಕರಣವನ್ನು ಸಿಬಿಐ ತನಿಖೆ ಕೋರಿ ಅರ್ಜಿದಾರರು ಮೇಲನವಿ ಸಲ್ಲಿಸಿದರು. ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತದೆ. ಸ್ನೇಹಮಯಿ ಕೃಷ್ಣ ಎಂಬುವರು ಹೈಕೋರ್ಟ್ಗೆ ಮೇಲನವಿ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬುದು ಅವರ ಸಂದೇಹವಾಗಿತ್ತು.
ನ್ಯಾಯಾಲಯವು ಎಲ್ಲವನ್ನೂ ಪರಾಮರ್ಶಿಸಿ ತೀರ್ಪು ನೀಡಿದೆ. ನಾವು ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ. ಅರ್ಜಿದಾರರು ಕಾನೂನು ಹೋರಾಟವನ್ನು ಮುಂದುವರೆಸುವುದು, ಬಿಡುವುದು ಅವರಿಗೆ ಬಿಟ್ಟದ್ದು ಎಂದು ವಿಜಯೇಂದ್ರ ಪುನರುಚ್ಚರಿಸಿದರು.
ಸಿಬಿಐ ತನಿಖೆಗೆ ಆದೇಶ ಮಾಡುವುದಿಲ್ಲ ಎಂದರೆ ಅದು ನಮ ಹೋರಾಟಕ್ಕೆ ಹಿನ್ನಡೆಯಲ್ಲ. ಅಷ್ಟಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆಯೇ? ಎಂದು ವಿಜಯೇಂದ್ರ ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ನ್ಯಾಯಾಲಯ ಸಿದ್ದರಾಮಯ್ಯನವರಿಗೆ ಕ್ಲೀನ್ಚಿಟ್ ಕೊಟ್ಟಿಲ್ಲ. ಒಂದು ಕಡೆ ಲೋಕಾಯುಕ್ತ ಮತ್ತೊಂದೆಡೆ ಇ.ಡಿ. ತನಿಖೆ ಮಾಡಿದೆ. ಎರಡೂ ವರದಿಗಳ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಪು ಬರಲಿದೆ. ಕಾದು ನೋಡೋಣ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
ನಾವು ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಬೇಕೆಂದು ತೀರ್ಮಾನಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಿದರು. ನಮ ಹೋರಾಟಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ. ಇದರಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರು ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಈ ಆರೋಪಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಮ ಹೋರಾಟ ಮುಡಾ ಅಕ್ರಮದ ವಿರುದ್ಧವೇ ಹೊರತು ಯಾವುದೇ ಒಂದು ಕುಟುಂಬದ ವಿರುದ್ಧವಲ್ಲ. ಪ್ರಕರಣವು ವಿಚಾರಣಾ ಹಂತದಲ್ಲಿರುವಾಗ ಆದೇಶದ ಬಗ್ಗೆ ನಾನು ಹೆಚ್ಚಿನ ವ್ಯಾಖ್ಯಾನ ಮಾಡುವುದು ಕಾನೂನು ದೃಷ್ಟಿಯಿಂದ ಸರಿಯಲ್ಲ ಎಂದರು.
ತಮ ತಂದೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪೋಸ್ಕೋ ಪ್ರಕರಣದಲ್ಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ನಲ್ಲಿ ವಾದ-ವಿವಾದ ನಡೆದು ಅಂತಿಮವಾಗಿ ನ್ಯಾಯಾಲಯ ನಮ ಅರ್ಜಿಯನ್ನು ಪುರಸ್ಕಾರ ಮಾಡಿದೆ. ಕೆಳಹಂತದ ನ್ಯಾಯಾಲಯ ನೀಡಿರುವ ಸಮನ್‌್ಸ ಮರುಪರೀಕ್ಷೆ ಮಾಡುವ ನಿಟ್ಟಿನಲ್ಲಿ ಆದೇಶ ನೀಡಿದೆ ಎಂದು ಹೇಳಿದೆ.