ಬೆಂಗಳೂರು,ಜು.4- ತಮ್ಮ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ನಾಳೆಯಿಂದ ಅನಿರ್ಧಿಷ್ಟ ಕಾಲ ಮುಷ್ಕರ ನಡೆಸುತ್ತಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರಿಗೆ ಸಂಘಟನೆಗಳ ಮುಖಂಡರ ಜೊತೆ ನಡೆಸುವ ಸಭೆ ಫಲಪ್ರದಕಾರಿಯಾಗದೆ ಮುಷ್ಕರ ಹಿಂತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಸಾರ್ವಜನಿಕರು ಬಸ್ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಲಿದೆ.
ಜನರಿಗೆ ಉಂಟಾಗಲಿರುವ ತೊಂದರೆಯನ್ನು ತಪ್ಪಿಸಲು ಸರ್ಕಾರ ಖಾಸಗಿ ಬಸ್‌ಗಳ ಮೊರೆ ಹೋಗಿದ್ದು, ರಾಜಧಾನಿ ಬೆಂಗಳೂರಿಗೆ 5 ಸಾವಿರ ಹಾಗೂ ವಿವಿಧ ಜಿಲ್ಲೆಗಳಿಗೆ 10 ಸಾವಿರ ಸೇರಿದಂತೆ ಒಟ್ಟು 15 ಸಾವಿರ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ಸಂಚಾರ ಸೇವೆ ಒದಗಿಸಲು ಮುಂದಾಗಿದೆ.
ಒಂದು ವೇಳೆ ಸಾರಿಗೆ ಸಂಘಟನೆಗಳ ಮುಖಂಡರು ತಮ ಪಟ್ಟು ಸಡಿಲಿಸದೆ ಬೇಡಿಕೆ ಈಡೇರಿಸಲೇಬೇಕೆಂದು ಒತ್ತಾಯಿಸಿದರೆ ವಿಶೇಷವಾಗಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಬಿಸಿ ತಟ್ಟುವುದು ಗ್ಯಾರಂಟಿ.
ಸಾರಿಗೆ ನಿಗಮಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಮತ್ತು ಇತರೆ ರಾಜ್ಯ ಸಾರಿಗೆ ಘಟಕಗಳ ನೌಕರರು ತಮ 38 ತಿಂಗಳ ವೇತನ ಬಾಕಿ, ವೇತನ ಪರಿಷ್ಕರಣೆ, ಮತ್ತು 2021ರ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದ ಸರ್ಕಾರಿ ಬಸ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡರೆ, ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆಯುವ ಮಹಿಳೆಯರಿಗೆ ತೊಂದರೆಯಾಗಲಿದೆ.
ಸಾರಿಗೆ ಬಸ್ ಮುಷ್ಕರ ದೀರ್ಘಕಾಲ ಮುಂದುವರಿದರೆ, ಆರ್ಥಿಕ ಒತ್ತಡವು ತೀವ್ರಗೊಳ್ಳಬಹುದು. ಮುಷ್ಕರದಿಂದ ಶಕ್ತಿ ಯೋಜನೆಗೆ ಉಂಟಾಗುವ ಹಿನ್ನಡೆಯು ಸರ್ಕಾರದ ವಿಶ್ವಾಸಾರ್ಹತೆಯ ಮೇಲೂ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರಿಗೆ ಅತ್ಯಂತ ಜನಪ್ರಿಯವಾಗಿದೆ. ಈ ಯೋಜನೆಯ ಸೌಲಭ್ಯವನ್ನು ಕಳೆದುಕೊಂಡರೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ.
ಈವರೆಗೆ 2 ಹಂತದಲ್ಲಿ ಕಾರ್ಮಿಕ ಇಲಾಖೆ ಜೊತೆ ಸಚಿವರು ನಡೆಸಿದ ಮಾತುಕತೆಯು ವಿಫಲವಾಗಿತ್ತು. ಸರ್ಕಾರ ಎಸಾ ಜಾರಿ ಮಾಡಿದರೂ, ನಾವು ಬಗ್ಗುವುದಿಲ್ಲ ಎಂದು ಕಾರ್ಮಿಕ ಸಂಘಟನೆ ದೃಢಪಡಿಸಿದೆ. ಸಾರಿಗೆ ಇಲಾಖೆಗೆ ಅವಲಂಬಿಸಿರುವ ಐಟಿ ಕಂಪನಿಗಳಿಗೂ ನಾಳೆಯಿಂದ ವರ್ಕ್‌ಫ್ರಂ ಹೋಮ್‌ಗೆ ಸರ್ಕಾರ ಮನವಿ ಮಾಡಿದೆ. ಇನ್ನು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವ ಜನರಿಗೆ ಅಗತ್ಯವಿದ್ದರೆ ಮಾತ್ರ ಅಥವಾ ಮುಷ್ಕರದ ಮಾಹಿತಿ ತಿಳಿದುಕೊಂಡೇ ಹೊರಡುವುದು ಸೂಕ್ತ ಎನ್ನಲಾಗಿದೆ.
ಕರಪತ್ರ ಹಂಚಿಕೆ:
ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಬಸ್ ಮುಷ್ಕರದ ಬಗ್ಗೆ ಪ್ರಯಾಣಿಕರಿಗೆ ಸಹಕಾರ ನೀಡುವಂತೆ ಕೋರಿ ಕರಪತ್ರ ಹಂಚಿಕೆ ಮಾಡಲಾಗಿದೆ. ಬಸ್ ಇಲ್ಲದಿದ್ದರೆ ದುಬಾರಿ ದರದ ಆಟೋ ಅವಲಂಬಿಸುವುದು ಕಷ್ಟವಾಗಲಿದೆ ಎಂದು ಪ್ರಯಾಣಿಕರು ಅವಲತ್ತುಕೊಂಡಿದ್ದಾರೆ.
ಸರ್ಕಾರ ಜನರಿಗಾಗುವ ಅನಾನುಕೂಲ ತಪ್ಪಿಸಲು ಸರಕಾರಿ ಬಸ್ ಪರ್ಯಾಯವಾಗಿ ಖಾಸಗಿ ಬಸ್ ಗಳ ಜೊತೆಗೆ ಮಾತುಕತೆ ನಡೆಸಿದೆ. ಕೆಲವೊಂದು ಷರತ್ತುಗಳನ್ನು ಹಾಕಿರುವ ಖಾಸಗಿ ಬಸ್ ಮಾಲೀಕರು ಅದನ್ನು ಈಡೇರಿಸಿದರೆ ಮಾತ್ರ ಸರ್ಕಾರದ ಜೊತೆ ಕೈಜೋಡಿಸಲು ಸಿದ್ಧ ಎಂದಿದ್ದಾರೆ. ಖಾಸಗಿ ಸಂಘಗಳ ಬೇಡಿಕೆ ಈಡೇರಿಸಿದರೆ ಬೆಂಗಳೂರಿಗೆ 4 ಸಾವಿರ ಸೇರಿದಂತೆ ರಾಜ್ಯಾದ್ಯಂತ ಒಟ್ಟು 11ಸಾವಿರ ಖಾಸಗಿ ಬಸ್‌ಗಳನ್ನು ಓಡಿಸುವುದಾಗಿ ಅಧಿಕಾರಿಗಳಿಗೆ ತಿಳಿಸಲಾಗಿದೆ.
- 80ರ ವೃದ್ಧನಿಗೆ ಪ್ರೀತಿ ಹೆಸರಲ್ಲಿ ನಾಲ್ವರು ಮಹಿಳೆಯರಿಂದ 9 ಕೋಟಿ ವಂಚನೆ
- ಸವಿತಕ್ಕ ಪುತ್ರನ ಆತಹತ್ಯೆಗೆ “ಡೆತ್ನೋಟ್” ವೆಬ್ಸೀರಿಸ್ ಕಾರಣವಂತೆ..?
- ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೋಕ್
- ಆನ್ಲೈನ್ ಗೇಮ್ಗಾಗಿ ಹಣಕ್ಕೆ ಪೀಡಿಸುತ್ತಿದ್ದ ತಂಗಿ ಮಗನನ್ನೇ ಕೊಂದ ಮಾವ
- ಮತಗಳ್ಳತನದ ವಿರುದ್ಧ ಬೆಂಗಳೂರಲ್ಲಿ ರಾಹುಲ್ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ