ಬೆಂಗಳೂರು,ಜು.4- ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ಸುತ್ತಮುತ್ತ ಭೂಸ್ವಾದೀನ ವಿರೋಧಿಸುವ ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿಂದು ಮಹತ್ವದ ಸಭೆ ನಡೆಸಿದರು.
ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ರೈತ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.ಪರಿಹಾರದ ಮೊತ್ತ ಅಥವಾ ಅಭಿವೃದ್ಧಿಪಡಿಸಿದ ಭೂಮಿಯ ಹಂಚಿಕೆ ಪ್ರಮಾಣವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿ ರೈತರ ಮುಂದಿಟ್ಟಿದ್ದಾರೆ.
ಭೂಸ್ವಾದೀನಕ್ಕೆ ವಿರೋಧಪಡಿಸುವುದು ಸರಿಯಲ್ಲ. ಕೈಗಾರಿಕೆ, ಕೃಷಿ ಎರಡೂ ಸಮಾನಾಂತರವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಕರಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ರೈತ ಸಂಘಟನೆಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ನಟ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡ ಪ್ರಕಾಶ್ ರೈ, ದಲಿತ ರೈತ ಸಮಾಜ ಪರಿವರ್ತನ ಹಾಗೂ ಎಡಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಭೈರತಿ ಸುರೇಶ್, ಶಾಸಕ ಎ.ಎಸ್.ಪೊನ್ನಣ್ಣ, ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಹಾಜರಿದ್ದರು.
ಫಲ-ತಾಂಬೂಲದೊಂದಿಗೆ ಮನವಿ :
ಸಭೆಗೆ ಆಗಮಿಸಿದ ರೈತಮುಖಂಡರು ಸೋರೆಕಾಯಿ, ದಪ್ಪಮೆಣಸಿನಕಾಯಿ, ಬಾಳೆಹಣ್ಣು, ಮಾವಿನಹಣ್ಣು, ದ್ರಾಕ್ಷಿ, ಪರಂಗಿ ಹಣ್ಣು ಹಾಗೂ ಹೂಗಳನ್ನು ಪ್ರತ್ಯೇಕ ಬುಟ್ಟಿಯಲ್ಲಿ ತಂದು ಮುಖ್ಯಮಂತ್ರಿಯವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಇಂತಹ ಸಮೃದ್ಧದ ಫಲ ನೀಡುವ ಭೂಮಿಯನ್ನು ಕೈಗಾರಿಕೆಗಳ ಹೆಸರಿನಲ್ಲಿ ಉದ್ಯಮಿಗಳಿಗೆ ಕೊಟ್ಟು ಬಡವರ, ರೈತರ ಬದುಕನ್ನು ಬೀದಿಪಾಲು ಮಾಡಬೇಡಿ ಎಂದು ಮನವಿ ಮಾಡಿದರು.ರೈತರು ತಂದಿದ್ದ ಹಣ್ಣು ತರಕಾರಿಗಳನ್ನು ಮುಖ್ಯಮಂತ್ರಿ ಪರಿಶೀಲಿಸಿ ಸಕಾರಾತಕವಾಗಿ ಸ್ಪಂದಿಸಿದರು.
ಬಿ.ಆರ್.ಪಾಟೀಲ್ ಹಾಜರು :
ನೀತಿ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ಆರ್.ಪಾಟೀಲ್ ಸಭೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗಳಿಗೆ ಸಂಬಂಧಪಟ್ಟಂತೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಬಿ.ಆರ್.ಪಾಟೀಲ್, ಬಹಳ ದಿನಗಳ ಬಳಿಕ ಮುಖ್ಯಮಂತ್ರಿಯವರ ಜೊತೆಯಲ್ಲಿ ಸಭೆಯಲ್ಲಿ ಕಾಣಿಸಿಕೊಂಡರು.