Thursday, February 6, 2025
Homeರಾಜ್ಯವಿವಿಧ ಇಲಾಖೆಗಳೊಂದಿಗೆ ಸಿಎಂ ಬಜೆಟ್ ಪೂರ್ವಭಾವಿ ಸಭೆ

ವಿವಿಧ ಇಲಾಖೆಗಳೊಂದಿಗೆ ಸಿಎಂ ಬಜೆಟ್ ಪೂರ್ವಭಾವಿ ಸಭೆ

CM holds pre-budget meeting with various departments

ಬೆಂಗಳೂರು,ಫೆ.6- ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ಇಂದಿನಿಂದ ವಿವಿಧ ಇಲಾಖೆಗಳ ಪೂರ್ವಭಾವಿ ಸಭೆ ಆರಂಭಿಸಿದ್ದಾರೆ.ಮೊಣಕಾಲು ನೋವಿನಿಂದಾಗಿ ವಿಶ್ರಾಂತಿಯಲ್ಲಿದ್ದ ಸಿದ್ದರಾಮಯ್ಯ ನವರು ಬಜೆಟ್ ಪೂರ್ವ ತಯಾರಿಗಾಗಿ ಮತ್ತೆ ಕಾರ್ಯಾರಂಭ ಮಾಡಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದಲೂ ರಾಜ್ಯ ಹಣಕಾಸು ಸ್ಥಿತಿಗತಿಗಳ ಬಗ್ಗೆ ಪ್ರತಿಯೊಂದು ಇಲಾಖೆಯ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಈ ಹಿಂದಿನ ಬಜೆಟ್ನಲ್ಲಿ ಘೋಷಿಸಲಾಗಿದ್ದ ಕಾರ್ಯಕ್ರಮದ ಅನುಷ್ಠಾನ, ಅನುದಾನ ನಿಗದಿ ಮತ್ತು ಬಳಕೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ಮುಂದುವರೆದು ಇಂದಿನಿಂದ ವಿವಿಧ ಇಲಾಖೆಗಳ ಜೊತೆ ಸಮಾಲೋಚನೆ ನಡೆಸಿ 2025-26ನೇ ಸಾಲಿನ ಬಜೆಟ್ಗೆ ಪ್ರಸ್ತಾವನೆಯನ್ನು ಸ್ವೀಕರಿಸಿದ್ದಾರೆ.

ಇಂದು ತಮ ಅಧಿಕೃತ ನಿವಾಸ ಕಾವೇರಿಯಲ್ಲಿ ಒಳಾಡಳಿತ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ, ಸಣ್ಣ ಕೈಗಾರಿಕೆ, ಇಂಧನ, ಕಾರ್ಮಿಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಸಹಕಾರ, ರೇಷೆ, ಪಶುಸಂಗೋಪನೆ ಸೇರಿದಂತೆ 14 ಇಲಾಖೆ ಅಧಿಕಾರಿ ಹಾಗೂ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ.

ಆಯಾ ಇಲಾಖೆಗಳ ಸಚಿವರು, ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹಿಂದಿನ ಬಜೆಟ್ನಲ್ಲಿ ಅನುಷ್ಠಾನಗೊಳಿಸಲಾದ ಯೋಜನೆಗಳು ಮತ್ತು ಬಳಕೆಯಾದ ಅನುದಾನ ಆಧರಿಸಿ ಮುಂದಿನ ಬಜೆಟ್ನಲ್ಲಿ ಹೊಸ ಯೋಜನೆಗಳ ಘೋಷಣೆ ಹಾಗೂ ಹಣಕಾಸು ಸೌಲಭ್ಯ ಒದಗಿಸುವುದಾಗಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.ಮಾರ್ಚ್ ಅಂತ್ಯದ ವೇಳೆ 2024-25ನೇ ಸಾಲಿನ ಬಜೆಟ್ ಘೋಷಣೆಯ ಎಲ್ಲಾ ಕಾರ್ಯಕ್ರಮಗಳನ್ನೂ ಅನುಷ್ಠಾನಕ್ಕೆ ತರಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ.

RELATED ARTICLES

Latest News