Tuesday, September 17, 2024
Homeರಾಜ್ಯಪುತ್ರನಿಗೆ ಟಿಕೆಟ್ ಕೊಡಿಸಲು ಇಬ್ರಾಹಿಂ ಲಾಬಿ.!

ಪುತ್ರನಿಗೆ ಟಿಕೆಟ್ ಕೊಡಿಸಲು ಇಬ್ರಾಹಿಂ ಲಾಬಿ.!

ಬೆಂಗಳೂರು,ಜು.24- ಶಿಗ್ಗಾವಿ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ನಾಯಕರ ಬಳಿ ಲಾಬಿ ನಡೆಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಸಿ.ಎಂ.ಇಬ್ರಾಹಿಂ, ವಿಧಾನಪರಿಷತ್ನಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದರು. ಪಕ್ಷ ಹಾಗೂ ನಾಯಕರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿ ಮುಜುಗರ ಉಂಟು ಮಾಡಿದ್ದರು.

ಕೊನೆಗೆ ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ಗೆ ಸೇರ್ಪಡೆಯಾದರು. ಅಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಜೆಡಿಎಸ್ ನಾಯಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಅಸಮಾಧಾನಗೊಂಡು ಜೆಡಿಎಸ್ನ ನಾಯಕರನ್ನು ಟೀಕಿಸಲಾರಂಭಿಸಿದರು. ಅಲ್ಲಿಂದಲೂ ಹೊರಗುಳಿದ ಸಿ.ಎಂ.ಇಬ್ರಾಹಿಂ ರಾಜಕೀಯವಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಮರಳಿ ಕಾಂಗ್ರೆಸ್ಗೆ ಬರಲಾಗದೇ, ಜೆಡಿಎಸ್ನಲ್ಲೂ ಯಾವುದೇ ಸ್ಥಾನಮಾನ ಪಡೆಯಲಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದರು.

ತಮ್ಮ ಪುತ್ರ ಫಯಾಜ್ ಇತ್ತೀಚೆಗೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಸಿ.ಎಂ.ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ.

ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಶಿಗ್ಗಾವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿದೆ. ಈ ಹಿಂದೆ 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಯಾಸಿರ್ ಅಹಮದ್ಖಾನ್ ಪಠಾಣ್ ಸ್ಪರ್ಧೆ ಮಾಡಿದ್ದರು. ಅದಕ್ಕೂ ಹಿಂದಿನ 2018, 2013 ಮತ್ತು 2008ರ ಚುನಾವಣೆಯಲ್ಲಿ ಸಯ್ಯದ್ ಅಜೀರ್ ಖಾದ್ರಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಕಾಂಗ್ರೆಸ್ ಶಿಗ್ಗಾವಿ ಕ್ಷೇತ್ರವನ್ನು ಅಲ್ಪಸಂಖ್ಯಾತರ ವರ್ಗಕ್ಕೆ ಮೀಸಲಿಡುತ್ತಾ ಬಂದಿದೆ. ಈ ಬಾರಿ ಯಾಸಿರ್ ಅಹಮದ್ಖಾನ್ ಪಠಾಣ್ ಮರು ಸ್ಪರ್ಧೆಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಸಿ.ಎಂ.ಇಬ್ರಾಹಿಂ ತಮ್ಮ ಪುತ್ರನಿಗೆ ಅವಕಾಶ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ಇದರ ಜೊತೆಗೆ ಕೇಂದ್ರ ಸಚಿವ ಕುಮಾರಸ್ವಾಮಿಯವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ, ತುಕಾರಾಂ ಸಂಸದರಾದ ಬಳಿಕ ತೆರವಾಗಿರುವ ಸಂಡೂರು ಕ್ಷೇತ್ರಕ್ಕೂ ಉಪಚುನಾವಣೆ ನಡೆಯಬೇಕಿದೆ. ಈ ಕ್ಷೇತ್ರಗಳಲ್ಲಿ ಅವಕಾಶ ಗಿಟ್ಟಿಸಲು ಕಾಂಗ್ರೆಸ್ನ ಘಟಾನುಘಟಿ ನಾಯಕರು ತೆರೆಮರೆಯ ಲಾಬಿ ನಡೆಸುತ್ತಿದ್ದಾರೆ. ಈ ಕ್ಷಣದವರೆಗೂ ತಮ್ಮನ್ನು ಜೆಡಿಎಸ್ನ ನಾಯಕರು ಎಂದು ಹೇಳಿಕೊಳ್ಳುತ್ತಿರುವ ಸಿ.ಎಂ.ಇಬ್ರಾಹಿಂ ತಮ್ಮ ಪುತ್ರನಿಗೆ ಕಾಂಗ್ರೆಸ್ನಲ್ಲಿ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Latest News