ಬೆಂಗಳೂರು, ಮೇ 30– ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳು ತಲೆ ಎತ್ತುತ್ತಿದ್ದು, ಅವುಗಳನ್ನು ಮಟ್ಟ ಹಾಕಲು ಮೀನಾಮೇಷ ಎಣಿಸುತ್ತಿರುವುದು ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಛಾಟಿ ಬೀಸಿದ್ದಾರೆ.ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಮುಖ್ಯ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೃಷಿ ಚಟುವಟಿಕೆಗಳು, ಕಾನೂನು ಸುವ್ಯವಸ್ಥೆ, ಸರ್ಕಾರದ ಯೋಜನೆಗಳ ಪ್ರಗತಿ, ಬಜೆಟ್ ಘೋಷಣೆಗಳ ಅನುಷ್ಠಾನ ಸೇರಿದಂತೆ ಹಲವು ವಿಚಾರಗಳ ಪ್ರಗತಿ ಪರಿಶೀಲಿಸಿದರು.
ಸಭೆಯ ಆರಂಭದಲ್ಲೇ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಲಕರಣೆಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಆದೇಶಿಸಿದರು. ಇತ್ತೀಚೆಗೆ ಕರಾವಳಿ ಹಾಗೂ ಹಲವು ಭಾಗಗಳಲ್ಲಿ ಕೋಮು ಸಂಬಂಧಿತ ಘಟನೆಗಳು ಹೆಚ್ಚಾಗುತ್ತಿವೆ. ಸಮಾಜಘಾತುಕ ಶಕ್ತಿಗಳು ತಲೆಎತ್ತಿವೆ. ಪ್ರಚೋದನಕಾರಿ ಭಾಷಣಗಳು ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಪಾಲನೆ ಜಿಲ್ಲಾಧಿಕಾರಿಗಳ ಹೊಣೆಗಾರಿಕೆ. ಈ ವಿಷಯದಲ್ಲಿ ಎಚ್ಚರಿಕೆಯಿಂದ ಇರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಾರವಾಗಿ ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ನಗರ ಪ್ರದೇಶಗಳ ಜನವಸತಿ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುವುದರಿಂದ ಜನಜೀವನಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಇಂತಹ ಪ್ರದೇಶಗಳನ್ನು ಗುರುತಿಸಬೇಕು ಮತ್ತು ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.
ಗ್ರಾಮ ಸಹಾಯಕರಿಂದ ಹಿಡಿದು ಜಿಲ್ಲಾಧಿಕಾರಿಗಳವರೆಗೂ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಸಾರ್ವಜನಿಕರಿಗೆ ಸದಾಕಾಲ ಲಭ್ಯವಿರಬೇಕು ಎಂದು ಸೂಚಿಸಿದ್ದಾರೆ.ಕೆರೆ ಒತ್ತುವರಿ ತೆರವುಗೊಳಿಸದ್ದಕ್ಕೆ ಸಿಎಂ ಗರಂ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೆರೆಗಳ ಒತ್ತುವರಿಯಾಗಿದೆ ಮತ್ತು ಯಾವುದನ್ನು ತೆರವುಗೊಳಿಸಲಾಗಿದೆ ಎಂಬುದನ್ನು ಮುಖ್ಯಮಂತ್ರಿ ಪರಿಶೀಲಿಸಿದರು.
ಎರಡು-ಮೂರು ಜಿಲ್ಲೆಗಳಲ್ಲಿ ಒಂದೂ ಕೆರೆ ಒತ್ತುವರಿ ತೆರವು ಮಾಡದಿರುವುದನ್ನು ಗಮನಿಸಿ ಸಿಟ್ಟಾದ ಮುಖ್ಯಮಂತ್ರಿಯವರು, ಆ ಬಗ್ಗೆ ವರದಿ ತರಿಸಿಕೊಂಡು ಉದಾಸೀನ ತೋರಿರುವ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ 10931 ಕೆರೆಗಳು ಒತ್ತುವರಿಯಾಗಿವೆ. ಇದುವರೆಗೆ 6065 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಳೆದ ಸಭೆಯಲ್ಲಿ ತಿಳಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನಹರಿಸಿ, ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಕೆರೆಗಳ ಒತ್ತುವರಿ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ಈ ವರ್ಷ 1395 ಪೋಕೋ ಪ್ರಕರಣಗಳು ದಾಖಲಾಗಿವೆ. ಇಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸರಿಯಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಸಿಂಧುತ್ವ ಪ್ರಮಾಣಪತ್ರವನ್ನು ನಿಗದಿತವಾಗಿ ಒಂದು ತಿಂಗಳ ಒಳಗಾಗಿ ನೀಡಬೇಕಿದ್ದರೂ, ಅದನ್ನು ಕೆಲವು ಜಿಲ್ಲೆಗಳಲ್ಲಿ ತಿಂಗಳುಗಟ್ಟಲೆ ವಿಲೇವಾರಿ ಮಾಡದೆ ಸತಾಯಿಸುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹ ವಿಳಂಬ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ಶಾಲೆಗಳಿಗೆ ಎಲ್ಲಾ ಸೌಲಭ್ಯ ನೀಡಿದ್ದರೂ ಎಸ್ಎಸ್ಎಲ್ಸಿಮತ್ತು ಪಿಯುಸಿ ಫಲಿತಾಂಶ ಕಳಪೆಯಾಗಿರಲು ಕಾರಣವೇನು? ಈ ಬಗ್ಗೆ ಆತ್ಮಾವಲೋಕನ ನಡೆಸಬೇಕು. ತಮ್ಮ ಜಿಲ್ಲೆಗಳಲ್ಲಿ ಫಲಿತಾಂಶ ಸುಧಾರಿಸುವುದು ಆಯಾ ಜಿಲ್ಲಾಧಿಕಾರಿ ಹಾಗೂ ಸಿಇಒಗಳ ಜವಾಬ್ದಾರಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸುಧಾರಣೆಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದರೂ, ಫಲಿತಾಂಶದಲ್ಲಿ ಯಾವಾಗಲೂ ಹಿಂದಿರಲು ಕಾರಣವೇನು? ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ) ಸಿಇಒಗಳು ನಿರಂತರ ಗಮನಹರಿಸಬೇಕು ಎಂದು ಆದೇಶಿಸಿದರು.
ರಾಜ್ಯದಲ್ಲಿ ಕಂದಾಯ ಗ್ರಾಮಗಳ ಘೋಷಣೆ ದಾಖಲೆ ಪ್ರಮಾಣದಲ್ಲಿ ಆಗಿದೆ. ಆದರೆ ಇನ್ನೂ ಬಾಕಿಯುಳಿದಿರುವ ಕಂದಾಯ ಗ್ರಾಮಗಳನ್ನು ಘೋಷಿಸುವ ಕಾರ್ಯ ಮುಂದಿನ 6 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಬಗರ್ ಹುಕುಂ ಅರ್ಜಿಗಳ ವಿಲೇವಾರಿ ತ್ವರಿತಗೊಳಿಸಬೇಕು. ಇದು ಯಾಕೆ ಕಡಿಮೆಯಾಗುತ್ತಿದೆ? ಎಂದು ಪ್ರಶ್ನಿಸಿದ ಸಿಎಂ, ಪೋಡಿಮುಕ್ತ ಅಭಿಯಾನ ನಿರಂತರವಾಗಿ ಮುಂದುವರೆಸಬೇಕು. ಶೇ.63 ಪೋಡಿಮುಕ್ತ ಆಗಿದ್ದು, ಇದರಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು.
ಶಾಲೆ, ಆಸ್ಪತ್ರೆ, ಅಂಗನವಾಡಿ, ಸ್ಮಶಾನ, ಕಬರಸ್ತಾನಗಳಿಗೆ ನಿವೇಶನ ಒದಗಿಸುವುದನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರುದ್ರಭೂಮಿ, ಕಬರಸ್ಥಾನಗಳಿಗೆ ಜಮೀನು ಒದಗಿಸುವುದನ್ನು ವಿಳಂಬ ಮಾಡಬಾರದು. ಅಗತ್ಯವಿರುವ ಇಲಾಖೆಗಳಿಗೆ ನಿವೇಶನಗಳನ್ನು ಆದ್ಯತೆ ಮೇರೆಗೆ ಒದಗಿಸಬೇಕು. 1858 ಗ್ರಾಮೀಣ ಅಂಗನವಾಡಿಗಳಿಗೆ 5187 ನಗರ ಅಂಗನವಾಡಿಗಳಿಗೆ ನಿವೇಶನ ಆಗತ್ಯವಿದೆ. 14 ಸರ್ಕಾರಿ ಕಾಲೇಜು ನಿವೇಶನ ಹಂಚಿಕೆಯಾಗಿಲ್ಲ ಎಂದು ವಿವರಿಸಿದರು.
ಅರಣ್ಯ ಹಕ್ಕುಗಳಿಗಾಗಿ 295176 ಅರ್ಜಿಗಳು ಸಲ್ಲಿಕೆಯಾಗಿದ್ದು, 16700 ಅರ್ಜಿಗಳಿಗೆ ಮಾತ್ರ ಅರಣ್ಯ ಹಕ್ಕುಪತ್ರ ಒದಗಿಸಲಾಗಿದೆ. ಇದನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ, ತಹಶೀಲ್ದಾರ್, ಎಸಿ ಕೋರ್ಟ್ಗಳಲ್ಲಿ ಪ್ರಕರಣಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಮೆಂಟ್ ಮೇಲೆ ತೀರ್ಮಾನ ಮಾಡಬೇಕು. ಪ್ರಕರಣಗಳನ್ನು ಮುಂದಕ್ಕೆ ಹಾಕುವ ಪ್ರವೃತ್ತಿ ಇರಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.