Wednesday, July 30, 2025
Homeರಾಜ್ಯಅನುದಾನ ಹಂಚಿಕೆ, ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕರ ಜತೆ ಸಿಎಂ ಸಭೆ

ಅನುದಾನ ಹಂಚಿಕೆ, ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕರ ಜತೆ ಸಿಎಂ ಸಭೆ

CM meets MLAs on grant distribution, development works

ಬೆಂಗಳೂರು, ಜು. 29- ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದ 4 ದಿನ ಕಾಂಗ್ರೆಸ್‌‍ ಪಕ್ಷದ ಶಾಸಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸುವ ಮೂಲಕ ಪಕ್ಷ ಸಂಘಟನೆ, ವಿವಿಧ ನೇಮಕಾತಿಗಳು, ಅನುದಾನ ಹಂಚಿಕೆ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯತೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇಂದು ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರ ಜೊತೆ ವಿಧಾನಸೌಧದ ಮುಖ್ಯ ಮಂತ್ರಿಗಳ ಕಚೇರಿಯಲ್ಲಿ ಚರ್ಚೆ ನಡೆಸಲಿದ್ದಾರೆ.ನಾಳೆ, ನಾಡಿದ್ದು ಮತ್ತು ಆ.7 ರಂದು ಕಾಂಗ್ರೆಸ್‌‍ ಪಕ್ಷದ 138 ಶಾಸಕರ ಜೊತೆ ಪ್ರತ್ಯೇಕವಾಗಿ ತಲಾ 10 ನಿಮಿಷದಂತೆ ಚರ್ಚೆ ನಡೆಸಲಿದ್ದಾರೆ.

ಪ್ರತಿಯೊಬ್ಬ ಕಾಂಗ್ರೆಸ್‌‍ ಶಾಸಕರಿಗೂ ತಲಾ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುತ್ತದೆ. ಅದರಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ 37.5 ಕೋಟಿ ರೂ.ಗಳನ್ನು ಬಳಕೆ ಮಾಡಬೇಕು. ಉಳಿದ 12.5 ಕೋಟಿ ರೂ.ಗಳನ್ನು ಶಾಸಕರ ವಿವೇಚನೆ ಆಧರಿಸಿ ಸಮುದಾಯ ಭವನ, ದೇವಸ್ಥಾನ, ಶಾಲಾ-ಕಾಲೇಜುಗಳ ಕಟ್ಟಡ ಹಾಗೂ ತಡೆಗೋಡೆಗಳ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.
ಈ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಲು ಶಾಸಕರಿಗೆ ಈಗಾಗಲೇ ನಿಗದಿತ ನಮೂನೆಗಳನ್ನು ಒದಗಿಸಲಾಗಿದೆ. ಅದರಲ್ಲಿ ಸೂಚಿತ ಕಾಮಗಾರಿಗಳನ್ನು ಪ್ರಸ್ತಾವನೆ ರೂಪದಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವುದು, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆ ವಹಿಸಲು ಮುಖ್ಯಮಂತ್ರಿಗಳು ಶಾಸಕರಿಗೆ ಹಿತವಚನ ನೀಡಲಿದ್ದಾರೆ. ಇದೇ ವೇಳೆ ವಿವಿಧ ನಿಗಮ ಮಂಡಳಿಗಳ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಹಾಗೂ ಪಕ್ಷದ ಸಂಘಟನೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ಬಹಳಷ್ಟು ಕಡೆ ಪಕ್ಷದ ಪ್ರಮುಖ ನಾಯಕರು ಹಾಗೂ ಶಾಸಕರ ನಡುವೆ ಹೊಂದಾಣಿಕೆಯ ಕೊರತೆ ಕಂಡುಬರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲು ಈ ಸಭೆ ಅತ್ಯಂತ ಮಹತ್ವದ್ದು ಎಂದು ಹೇಳಲಾಗಿದೆ.

ಹೈಕಮಾಂಡ್‌ ಸೂಚನೆ :
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಇತ್ತೀಚೆಗೆ ಬೆಂಗಳೂರಿಗೆ ಬಂದು ಪ್ರತಿಯೊಬ್ಬ ಶಾಸಕರ ಜೊತೆಯೂ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಅಹವಾಲುಗಳನ್ನು ಸಚಿವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ತಲುಪಿಸಲಾಯಿತು. ಅದರ ಮುಂದುವರೆದ ಭಾಗವಾಗಿ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.

ಪಂಚಖಾತ್ರಿಗಳಿಂದಾಗಿ ಹಣದ ಕೊರತೆಯಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಹಲವಾರು ಶಾಸಕರು ಆರೋಪಿಸಿದ್ದರು. ಆದರೆ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆಸಿದ ಬಜೆಟ್‌ನಲ್ಲಿ 83 ಸಾವಿರ ಕೋಟಿ ರೂ.ಗಳ ಯೋಜನಾ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಹೆಚ್ಚುವರಿಯಾಗಿ 8 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿ ಕಾಮಗಾರಿಗಳಿಗಾಗಿಯೇ ಹಂಚಿಕೆ ಮಾಡಲಾಗುತ್ತಿದೆ. ಬೆಂಗಳೂರು ನಗರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೂ 50 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಅನುದಾನದ ಲಭ್ಯತೆ ಇದೆ.

ಹೀಗಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಇದೆ ಎಂಬ ಆರೋಪಗಳು ಅಪ್ರಸ್ತುತ ಎಂದು ಮುಖ್ಯಮಂತ್ರಿ ಶಾಸಕರಿಗೆ ಮನವರಿಕೆ ಮಾಡಿಕೊಡುತ್ತಿದ್ದು, ವಿರೋಧಪಕ್ಷಗಳು ಟೀಕೆ ಮಾಡಿದಾಗ ತಕ್ಕ ಪ್ರತ್ಯುತ್ತರ ನೀಡುವಂತೆ ಸಲಹೆ ನೀಡಿದ್ದಾರೆ.ಬೆಂಗಳೂರಿನ 28 ಶಾಸಕರನ್ನು ಹೊರತುಪಡಿಸಿ ರಾಜ್ಯದಲ್ಲಿನ 196 ಶಾಸಕರ ಪೈಕಿ ಆಡಳಿತ ಪಕ್ಷದ 138 ಜನರಿಗೆ ತಲಾ 50 ಸಾವಿರ ಕೋಟಿ ರೂ.ಗಳನ್ನು ಜೆಡಿಎಸ್‌‍-ಬಿಜೆಪಿಯ 84 ಶಾಸಕರಿಗೆ ತಲಾ 25 ಕೋಟಿ ರೂ.ಗಳ ಅನುದಾನವನ್ನು ಸಿದ್ದರಾಮಯ್ಯ ಸದರಿ ತಿಂಗಳಿನಿಂದ ಒದಗಿಸುತ್ತಿದ್ದಾರೆ.

RELATED ARTICLES

Latest News