Thursday, March 13, 2025
Homeರಾಜ್ಯವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯ್ತು ಬಜೆಟ್ ಮೇಲೆ ಚರ್ಚೆ ವೇಳೆ ಸಿಎಂ, ಸಚಿವರು ಹಾಗೂ ಅಧಿಕಾರಿಗಳು ಗೈರು...

ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯ್ತು ಬಜೆಟ್ ಮೇಲೆ ಚರ್ಚೆ ವೇಳೆ ಸಿಎಂ, ಸಚಿವರು ಹಾಗೂ ಅಧಿಕಾರಿಗಳು ಗೈರು ಹಾಜರಿ

CM, ministers and officials absent during budget debate

ಬೆಂಗಳೂರು, ಮಾ.13- ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ್ ಬಜೆಟ್ ಮೇಲೆ ಚರ್ಚೆ ಮಾಡುವ ವೇಳೆ ಮುಖ್ಯಮಂತ್ರಿಯಾದಿಯಾಗಿ ಸಚಿವರು ಮತ್ತು ಅಧಿಕಾರಿಗಳ ಮಧ್ಯೆ ಗೈರುಹಾಜರಿ ವ್ಯಾಪಕ ಚರ್ಚೆಗೆ ಗ್ರಾಸವಾಗಿ ಕೆಲಕಾಲ ಗದ್ದಲದ ಸನ್ನಿವೇಶ ಸೃಷ್ಟಿಯಾಯಿತು.

ಆರ್.ಅಶೋಕ್ ಬಜೆಟ್ ಮೇಲೆ ಮಾತನಾಡುತ್ತಿದ್ದಾಗ ಸದನದಲ್ಲಿ ಕೇವಲ 4 ಮಂದಿ ಸಚಿವರಿದ್ದರು. ಅಧಿಕಾರಿಗಳ ಗ್ಯಾಲರಿಯಲ್ಲಿ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳು ಇರಲಿಲ್ಲ. ಇದರಿಂದ ಸಿಟ್ಟಾದ ಬಿಜೆಪಿಯ ಆಶ್ವತ್ಥನಾರಾಯಣ, ವಿರೋಧಪಕ್ಷದ ನಾಯಕರ ಮಾತಿಗೆ ಬೆಲೆ ಇಲ್ಲವೇ?, ಮುಖ್ಯಮಂತ್ರಿಯವರು ಕಡ್ಡಾಯವಾಗಿ ಹಾಜರಿದ್ದು ವಿಪಕ್ಷ ನಾಯಕರ ಮಾತು ಕೇಳಬೇಕಿತ್ತು. ಆನಾರೋಗ್ಯವಿದೆ, ಗೈರುಹಾಜರಾಗುತ್ತೇವೆ ಎಂದು ಅವರು ಪತ್ರ ಬರೆದು ಅನುಮತಿ ಕೇಳಿದ್ದಾರೆಯೇ? ಸರ್ಕಾರ ಈ ರೀತಿಯ ನಿರ್ಲಕ್ಷ್ಯ ಏಕೆ ವಹಿಸುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿಯ ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್, ಸಿ.ಸಿ.ಪಾಟೀಲ್, ಬಿ.ವೈ.ವಿಜಯೇಂದ್ರ ಮತ್ತಿತರರು ಇದಕ್ಕೆ ದನಿಗೂಡಿಸಿ ಸರ್ಕಾರದ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಪರವಾಗಿ ಸಚಿವರಾದ ಚಲುವರಾಯಸ್ವಾಮಿ, ಕಲಾಪದಲ್ಲಿ 15 ಮಂದಿ ಸಚಿವರಿದ್ದೇವೆ. ಮಾತನಾಡಬೇಕು ಎಂಬ ಚಟಕ್ಕಾಗಿ ಟೀಕೆ ಮಾಡಿದರೆ ಏನು ಹೇಳಲು ಸಾಧ್ಯ?, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ವಿಧಾನಪರಿಷತ್‌ ನಲ್ಲಿದ್ದಾರೆ. ಶೀಘ್ರವೇ ಇಲ್ಲಿಗೆ ಬರುತ್ತಾರೆ. ವಿರೋಧಪಕ್ಷದ ನಾಯಕರು ಮಾತನಾಡುವುದನ್ನು ನಾವೆಲ್ಲಾ ಕೇಳಿ ಬರೆದುಕೊಳ್ಳುತ್ತೇವೆ. ಚರ್ಚೆ ಮುಂದುವರೆಯಲಿ ಎಂದರು.

ಸಚಿವ ಕೆ.ಜೆ.ಜಾರ್ಜ್, ನಾನು ಒಂದು ಗಂಟೆಮಾತನಾಡುತ್ತೇನೆ. ಆವರೆಗೂ ಯಾರೂ ಮಾತನಾಡಬೇಡಿ ಎಂದು ಅಶೋಕ್ ರವರೇ ಆರಂಭದಲ್ಲೇ ಹೇಳಿದ್ದಾರೆ. ಅವರು ಮಾತನಾಡುವಾಗ ನಾವು ಬಾಯಿ ಮುಚ್ಚಿಕೊಂಡಿರಬೇಕಾಗುತ್ತದೆ ಎಂದರು.
ಮಾತಿಗೆ ಅಡ್ಡಿಪಡಿಸಬೇಡಿ ಎಂದರೆ ಸದನದ ಹೊರಹೋಗಿ ಎಂದು ನಾನು ಹೇಳಿಲ್ಲ ಎಂದು ಆರ್.ಅಶೋಕ್ ಸಮಜಾಯಿಷಿ ನೀಡಿದರು.

ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಯವರಿಗೆ ಹುಷಾರಿಲ್ಲ ಎಂದರೆ ಪತ್ರ ಕೊಟ್ಟಿದ್ದಾರೆಯೇ? ಎಂದು ಕೇಳುತ್ತಾರೆ. ನೋಡಿದರೆ ತಿಳಿಯುವುದಿಲ್ಲವೇ?, ಬಿಜೆಪಿಯ ಮತ್ತೊಬ್ಬ ನಾಯಕ ದಲಿತರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಕ್ಕೆ ಮುಖ್ಯಮಂತ್ರಿಯವರಿಗೆ ಈ ಸ್ಥಿತಿ ಬಂದಿದೆ ಎನ್ನುತ್ತಾರೆ. ಬಿಜೆಪಿಯವರು ಮಾನವೀಯತೆ ಮತ್ತು ಸಂಸ್ಕೃತಿ ಇಲ್ಲದಂತೆ ಮಾತನಾಡುತ್ತಿದ್ದಾರೆ ಎಂದಾಗ ಡಾ.ಸಿ.ಎನ್.ಅಶ್ವತ್ಥನಾರಾಯಣ ನೀವು ಯಾವ ಸಂಸ್ಕೃತಿ ಬಗ್ಗೆ ಮಾತನಾಡುತ್ತಿದ್ದೀರ ಎಂದು ತಿರುಗೇಟು ನೀಡಿದರು.

ಆಡಳಿತ ಪಕ್ಷದಿಂದ ಶಾಸಕರಾದ ಶಿವಲಿಂಗೇಗೌಡ, ಸಚಿವ ಭೈರತಿ ಸುರೇಶ್ ಮತ್ತಿತರರು ಮುಖ್ಯಮಂತ್ರಿಯವರ ಗೈರುಹಾಜರಿಯನ್ನು ಸಮರ್ಥಿಸಿಕೊಂಡರು. ಅದರೆ ಅಷ್ಟರಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸದನಕ್ಕೆ ಆಗಮಿಸಿ ಸಭಾಪತಿಯ ಅನುಮತಿ ಮೇರೆಗೆ ನಾನು ಸದನದ ಹೊರಗಿದ್ದೆ. ಇದಕ್ಕೆಲ್ಲಾ ನಿಮ್ಮೆಲ್ಲರ ಸಹಕಾರವೂ ಇದೆ ಎಂದು ನಾನು ಭಾವಿಸುತ್ತೇನೆ. ವಿರೋಧಪಕ್ಷದವರ ನಾಯಕರ ಮಾತುಗಳನ್ನು ನಾನು ಕೇಳುತ್ತೇನೆ ಎಂದು ಕುಳಿತುಕೊಂಡರು. ಅನಂತರ ಕಲಾಪ ಮುಂದುವರೆಯಿತು.

RELATED ARTICLES

Latest News