ಬೆಂಗಳೂರು, ಮೇ 2- ಮಂಗಳೂರಿನಲ್ಲಿ ನಡೆದಿರುವ ರೌಡಿಶೀಟರ್ ಕೊಲೆಗೆ ಕಾರಣಗಳೇನು ಎಂಬುದನ್ನು ಸಮಗ್ರ ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಕೊಲೆ ಆದವನು ರೌಡಿ ಶೀಟರ್ ಎನ್ನಲಾಗುತ್ತಿದೆ. ಸಮಗ್ರ ತನಿಖೆಗೆ ಸೂಚನೆ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಕಾನೂನು ಸುವ್ಯವಸ್ಥೆಯ ಎಡಿಜಿಪಿಯವರಿಗೆ ಸೂಚನೆ ನೀಡಲಾಗಿದೆ ಎಂದರು.
ಮನುಷ್ಯರ ಪ್ರಾಣ ಮುಖ್ಯ. ಅಪರಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಕೊಲೆ ಪೂರ್ವ ನಿಯೋಜಿತವೇ ಅಲ್ಲವೇ ಎಂಬುದು ಇನ್ನು ಗೊತ್ತಿಲ್ಲ. ಅದರ ತನಿಖೆ ನಡೆಯಬೇಕು ಎಂದು ಹೇಳಿದರು.
ಇಂತಹ ಘಟನೆಗಳು ನಡೆದಾಗ ಬಿಜೆಪಿಯವರು ಸ್ಥಳಕ್ಕೆ ಹೋಗಿ ರಾಜಕೀಯ ಮಾಡುತ್ತಾರೆ. ಕಳೆದ ವಾರ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾಗಿ 26 ಮಂದಿ ಸಾವನ್ನಪ್ಪಿದ್ದರು. ಅಲ್ಲಿಗೆ ಪ್ರಧಾನಿಯವರು ಭೇಟಿ ನೀಡಿದ್ದಾರೆಯೇ? ಅದು ಭದ್ರತಾ ಲೋಪವಲ್ಲವೇ ಎಂದು ಪ್ರಶ್ನಿಸಿದರು.
ನಮಿಂದ ಸಚಿವ ಸಂತೋಷ್ ಲಾಡ್ ಪಹಲ್ಗಾಮ್‌ಗೆ ಹೋಗಿದ್ದರು. ಅವರನ್ನು ವಿಚಾರಿಸಿದಾಗ ದಾಳಿಯಾದ ಸಂದರ್ಭದಲ್ಲಿ ಒಬ್ಬ ಭದ್ರತಾ ಸಿಬ್ಬಂದಿಯೂ ಇರಲಿಲ್ಲ ಎನ್ನಲಾಗಿದೆ. ಇದೆಲ್ಲ ವೈಫಲ್ಯ ಎಂದು ಹೇಳಲಾಗುವುದಿಲ್ಲವೇ? ಎಂದು ಮರುಪ್ರಶ್ನೆ ಮಾಡಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಬೆದರಿಕೆ ಬಂದಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ.ಹಾಗೆ ನೋಡಿದರೆ ನನಗೂ ಕೂಡ ಬಹಳಷ್ಟು ಬೆದರಿಕೆಗಳು ಬರುತ್ತಿರುತ್ತವೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸ್ಪೋಟಿಸುವುದಾಗಿ ಬೆದರಿಕೆ ಕರೆ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು. ಮದ್ಯದ ಬೆಲೆ ಹೆಚ್ಚಾಗುವುದಕ್ಕೆ ಟೆಂಪ್ರೆನ್‌್ಸ ಕೋಡ್ ಅನ್ವಯವಾಗಲಿದೆ. ಅದು ಕಾರಣ ಎಂದು ತಿಳಿಸಿದರು.