ಬೆಂಗಳೂರು, ನ.24- ಅಧಿಕಾರ ಹಂಚಿಕೆಯ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯ ಮಂತ್ರಿಯವರ ನಡುವೆ ವೈಮನಸ್ಯ, ಅಸಮಾಧಾನ ಇಂದು ಎದ್ದು ಕಾಣಲಾರಂಭಿಸಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರ ಆಗಮನಕ್ಕೂ ಕಾಯದೆ ಗುದ್ದಲಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮವನ್ನು ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಎಂ. ಸಿ.ಸುಧಾಕರ್ ಎಚ್.ಸಿ. ಮಹಾದೇವಪ್ಪ ಅವರೊಂದಿಗೆ ಉದ್ಘಾಟಿಸಿದರು. ತಡವಾಗಿ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ವೇದಿಕೆ ಮುಂಭಾಗದಲ್ಲಿ ಸೇರಿದ ಜನರತ್ತ ಕೈಬೀಸಿ ಅಭಿನಂದಿಸುವ ಮೂಲಕ ವೇದಿಕೆಯಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಚುರುಕಾಗಿ ಸಂಚರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಶಾಸಕರಿಗೆ, ಸಚಿವರಿಗೆ ಕೈ ಮುಗಿಯುತ್ತಲೇ ವಿಶ್ ಮಾಡಿದ ಡಿ.ಕೆ.ಶಿವಕುಮಾರ್, ಎಲ್ಲರಂತೆ ಸಿದ್ದರಾಮಯ್ಯ ಅವರ ಮುಂದೆಯೂ ಕೈಮುಗಿದುಕೊಂಡೇ ಸಾಗಿದರು. ಈ ಮೊದಲೆಲ್ಲ ವೇದಿಕೆಗೆ ಆಗಮಿಸಿದಾಗ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪರಸ್ಪರ ಕೈ ಕುಲುಕಿ ಆತೀಯತೆಯಿಂದ ಮಾತನಾಡಿಕೊಳ್ಳುತ್ತಿದ್ದರು. ಇಂದು ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತುಕೊಂಡು ಮಾತನಾಡಿದರಾದರೂ, ಅವರಲ್ಲಿ ಮೊದಲಿದ್ದ ಆತೀಯತೆ ಕಾಣಲಿಲ್ಲ. ಇಬ್ಬರ ಮುಖಗಳೂ ಗಂಟಿಕ್ಕಿದಂತೆ ಕಂಡು ಬಂದವು.
