Monday, November 25, 2024
Homeರಾಜಕೀಯ | Politicsಸಿದ್ದರಾಮಯ್ಯ ಕೆಳಗಿಳಿಯುವುದನ್ನ ಕಾಯುತ್ತಿರುವ ಕಾಂಗ್ರೆಸ್ ನಾಯಕರು, ಸಿಎಂ ಕುರ್ಚಿಗೆ ಬಹಿರಂಗ ಕಚ್ಚಾಟ

ಸಿದ್ದರಾಮಯ್ಯ ಕೆಳಗಿಳಿಯುವುದನ್ನ ಕಾಯುತ್ತಿರುವ ಕಾಂಗ್ರೆಸ್ ನಾಯಕರು, ಸಿಎಂ ಕುರ್ಚಿಗೆ ಬಹಿರಂಗ ಕಚ್ಚಾಟ

CM Post Fight In Karnataka

ಬೆಂಗಳೂರು,ಸೆ.8- ಕೂಸುಟ್ಟುವ ಮುನ್ನವೇ ಖುಲಾವಿ ಎನ್ನುವಂತೆ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲದೇ ಇದ್ದರೂ ಒಬ್ಬರಿಗೊಬ್ಬರು ನಾನೇ ಮುಖ್ಯಮಂತ್ರಿ ಎಂದು ಪೈಪೋಟಿಗಿಳಿದು ಪರಸ್ಪರ ಮಾತಿನ ಚಕಮಕಿ ನಡೆಸುತ್ತಿದ್ದಾರೆ.

ತೆರೆಮರೆಯಲ್ಲಿ ಒಂದಷ್ಟು ಚಟುವಟಿಕೆಗಳು ಕಾಂಗ್ರೆಸ್ನಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಇದರ ನಡುವೆ ಬಹಿರಂಗವಾಗಿಯೇ ಕೆಲವರು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆ ಮಾಡುತ್ತಿರುವುದು ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಅವರ ನಡುವೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಬಹಿರಂಗ ವಾಗ್ವಾದಗಳು ನಡೆದಿವೆ.

ಶಿವಾನಂದ ಪಾಟೀಲ್ ಕಾಂಗ್ರೆಸ್ನಲ್ಲಿ ಆರಂಭದಿಂದಲೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಆಗಾಗ್ಗೆ ಮುಜುಗರ ಉಂಟು ಮಾಡುತ್ತಿರುವುದು ಕಂಡುಬಂದಿದೆ. ಸಚಿವ ಎಂ.ಬಿ.ಪಾಟೀಲ್ ವೀರಶೈವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಎಂಬ
ಹೋರಾಟ ರೂಪಿಸಿ 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಗ್ಗರಿಸುವಂತೆ ಮಾಡಿದ್ದರು.

2023 ರ ವಿಧಾನಸಭಾ ಚುನಾವಣೆಗೆ ಮುನ್ನ ಶಿವಾನಂದ ಪಾಟೀಲ್ ನನಗೆ ಯಾವ ಹೈಕಮಾಂಡ್ ಇಲ್ಲ, ನನಗೆ ನಾನೇ ಹೈಕಮಾಂಡ್ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ವರಿಷ್ಠರ ವಿರುದ್ಧ ಸೆಡ್ಡು ಹೊಡೆದಿದ್ದರು.

ಚುನಾವಣೆ ಬಳಿಕ ಸರ್ಕಾರ ರಚನೆಯಾದಾಗ ಅನಿವಾರ್ಯವಾಗಿ ಇವರಿಬ್ಬರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಉದ್ಭವಿಸಿತ್ತು. ಎಂ.ಬಿ.ಪಾಟೀಲ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರಿಂದಾಗಿ ಅವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಅನಿವಾರ್ಯತೆ ಸೃಷ್ಟಿಯಾಯಿತು.

ಶಿವಾನಂದ ಪಾಟೀಲ್ ಕಾಂಗ್ರೆಸ್ನಿಂದ ಹೊರಗಡೆ ಕಾಲಿಟ್ಟಿದ್ದಾರೆ ಎಂಬ ವ್ಯಾಖ್ಯಾನಗಳಿದ್ದವು. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಗಡಿಭಾಗಗಳಲ್ಲಿ ಶಿವಾನಂದ ಪಾಟೀಲ್ ಪ್ರಭಾವಿ ಲಿಂಗಾಯತ ಸಮುದಾಯದ ನಾಯಕರಾಗಿರುವುದರಿಂದಾಗಿ ಅವರನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್ಗೆ ಎದುರಾಯಿತು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ನ ನಿಷ್ಠಾವಂತ ನಾಯಕ ವಿಜಯಾನಂದ ಕಾಶಪ್ಪನವರ್ ಅವರನ್ನು ಕಡೆಗಣಿಸಿ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಅವರಿಗೆ ಬಾಗಲಕೋಟೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಸಂಕಷ್ಟ ಕಾಲದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ವೀಣಾ ಕಾಶಪ್ಪನವರ್ 2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಸಚಿವ ಶಿವನಾಂದ ಪಾಟೀಲ್ಗಾಗಿ ವೀಣಾ ಕಾಶಪ್ಪನವರ್ ಅವರನ್ನು ಪರಿಗಣಿಸಲಾಯಿತು. ಈಗ ಅದೇ ಶಿವಾನಂದ ಪಾಟೀಲ್ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಬಂದಾಗ ಎಂ.ಬಿ.ಪಾಟೀಲ್ಗೆ ಸೆಡ್ಡು ಹೊಡೆದಿದ್ದಾರೆ. ಇಬ್ಬರ ನಡುವೆ ವಾದ-ವಾಗ್ವಾದಗಳು ತಾರಕಕ್ಕೇರಿವೆ.
ಎಂ.ಬಿ.ಪಾಟೀಲ್ ಪಕ್ಷದಲ್ಲಿ ನಾನು ಶಿವಾನಂದ ಪಾಟೀಲ್ಗಿಂತಲೂ ಹಿರಿಯನಿದ್ದು, ಒಂದಲ್ಲಾ ಒಂದು ದಿನ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯಾಗುತ್ತೇನೆ ಎಂದಿದ್ದಾರೆ.

ಇತ್ತ ಶಿವಾನಂದ ಪಾಟೀಲ್ ತಮನ್ನು ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಮೂಲಕ ಎಂ.ಬಿ.ಪಾಟೀಲ್ಗೆ ಅಡ್ಡಗಾಲು ಹಾಕುವ ಮುನ್ಸೂಚನೆ ನೀಡಿದ್ದಾರೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದ್ದು, ಸದ್ಯಕ್ಕೆ ಆ ಹುದ್ದೆ ಖಾಲಿ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದರ ನಡುವೆ ಸಚಿವ ಸತೀಶ್ ಜಾರಕಿಹೊಳಿ 2-3 ಬಾರಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆ ವಿಚಾರ ಬಂದರೆ ತಮನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಪಾದಿಸುವುದು ತಿಳಿದುಬಂದಿದೆ.

ಇತ್ತ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲರ ಮನೆಗೆ ತೆರಳಿ ಉಪಹಾರ ಕೂಟ, ಭೋಜನಾ ಕೂಟ ನಡೆಸುವ ಮೂಲಕ ಸದ್ದಿಲ್ಲದೆ ತೆರೆಮರೆಯ ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿದೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಒಳಗೊಳಗೇ ಅಸಮಾಧಾನದ ಜ್ವಾಲಾಮುಖಿಗಳು ಕುದಿಯುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರೆಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸದ್ದಿಲ್ಲದೇ ತಮದೇ ಶೈಲಿಯಲ್ಲಿ ವೇದಿಕೆ ಸಜ್ಜುಗೊಳಿಸುವ ಯತ್ನ ನಡೆಸುತ್ತಿದ್ದಾರೆ.

ಶಿವಾನಂದ ಪಾಟೀಲ್ ಯೂ ಟರ್ನ್ :
ಬೆಂಗಳೂರು,ಸೆ.8- ಕೆಪಿಸಿಸಿ ಅಧ್ಯಕ್ಷರಾಗಿ ಕಷ್ಟಪಟ್ಟು ದುಡಿದು ಪಕ್ಷವನ್ನು ಅಧಿಕಾರಕ್ಕೆ ತಂದ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇತ್ತು. ಅದು ಈಡೇರಿಲ್ಲ. ಬೇರೆಯವರು ಅವಕಾಶ ಪಡೆದಿದ್ದಾರೆ ಎಂದು ಹೇಳುವ ಮೂಲಕ ಸಚಿವ ಶಿವಾನಂದ ಪಾಟೀಲ್ ತಮ ವಿವಾದಿತ ಹೇಳಿಕೆಯಿಂದ ಯೂಟರ್ನ್ ಪಡೆದಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾನಂದ ಪಾಟೀಲ್ ಮಂತ್ರಿಯಾಗಬಾರದು ಎಂದು ಕೆಲವರು ಪಣ ತೊಟ್ಟಿದ್ದರು. ಅದಕ್ಕಾಗಿ ನನಗೆ ಸಚಿವನಾಗಬೇಕು ಎಂಬ ಆಸೆ ಇತ್ತು. ಸಚಿವನಾಗಿದ್ದೇನೆ. ನನಗೆ ಇಷ್ಟು ಸಾಕು. ಉಳಿದಂತೆ ಮುಖ್ಯಮಂತ್ರಿಯಾಗುವ ಅಥವಾ ಬೇರೆ ಯಾವುದೇ ಆಕಾಂಕ್ಷೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಗವಂತ ಈಗ ಕೊಟ್ಟಿರುವುದಕ್ಕೆ ನಾನು ಸಂತೃಪ್ತಿಯಲ್ಲಿದ್ದೇನೆ. ಪಕ್ಷದಲ್ಲಿ ಹಿರಿಯ, ಕಿರಿಯ ಎಂಬುದು ಮುಖ್ಯವಲ್ಲ. ನನಗಿಂತ ಹಿರಿಯರು ಬಹಳಷ್ಟು ಜನರಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಬಹಳಷ್ಟು ಜನ ಬಹಳಷ್ಟು ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ, ಪಕ್ಷ ಅಧಿಕಾರಕ್ಕೆ ಬಂದಿದೆ, ಅವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಿತ್ತು. ಬೇರೆಯವರು ಮುಖ್ಯಮಂತ್ರಿಯಾದರು. ಅವಕಾಶ ಸಿಗದಿರುವ ಹಿರಿಯರ ಆಸೆಗಳು ಮೊದಲು ಈಡೇರಲಿ. ಅದನ್ನು ನೋಡಿ ನಾವು ಖುಷಿ ಪಡುತ್ತೇವೆ ಎಂದಿದ್ದಾರೆ.

ಈ ಮೊದಲು ಆರ್.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಕಟ್ಟಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರಂತಹ ಎಲ್ಲಾ ಹಿರಿಯರು ಮೊದಲು ಅವಕಾಶ ಪಡೆಯಲಿ. ಅನಂತರ ಎಂ.ಬಿ.ಪಾಟೀಲ್ರನ್ನು ಪರಿಗಣಿಸಬಹುದು ಎಂದು ಹೇಳಿದರು.

ಎಂ.ಬಿ.ಪಾಟೀಲ್ ಮತ್ತು ತಮ ನಡುವೆ 1991 ರಿಂದಲೂ ಶೀಥಲ ಸಮರವಿತ್ತು. 2004ರಲ್ಲಿ ಇದನ್ನು ಯಾರು ಬಗೆಹರಿಸಿಕೊಂಡರು ಎಂದು ತಿಳಿದುಕೊಳ್ಳಬೇಕು. ನಾವಿಬ್ಬರೂ ಒಂದೇ ಪಕ್ಷದಲ್ಲಿದ್ದೇವೆ. ನಮ ನಡುವೆ ಯಾವುದೇ ಶೀಥಲ ಸಮರವಿಲ್ಲ. ಯಾರಿಗಾದರೂ ವೈಯಕ್ತಿಕವಾಗಿ ಆ ರೀತಿಯ ಭಾವನೆ ಇದ್ದರೆ ಅದು ದುರ್ದೈವ ಎಂದರು.

ಪಕ್ಷದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಲಿ, ನನಗೂ ಅದಕ್ಕೂ ಸಂಬಂಧವಿಲ್ಲ. ದೇವರ ಕೃಪೆ ಇದ್ದರೆ ಏನು ಬೇಕಾದರೂ ಸಾಧ್ಯ ಎಂದು ಉರ್ದು ನಾಣ್ಣುಡಿಯನ್ನು ಪ್ರಸ್ತಾಪಿಸಿದರು. ಸಿದ್ದರಾಮಯ್ಯನವರು ತಪ್ಪೇ ಮಾಡಿಲ್ಲ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಈಗ ಪ್ರಕರಣದ ನ್ಯಾಯಾಲಯದ ವಿಚಾರಣೆಯಲ್ಲಿದೆ. ಒಂದು ವೇಳೆ ಅಲ್ಲಿ ಸಿದ್ದರಾಮಯ್ಯನವರ ವಿರುದ್ಧವಾಗಿ ತೀರ್ಪು ಬಂದರೂ ಅರವಿಂದ್ ಕೇಜ್ರಿವಾಲ್ ಅವರ ರೀತಿ ಸಿದ್ದರಾಮಯ್ಯ ರಾಜಿನಾಮೆ ನೀಡದೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಇದಕ್ಕೆ ಪಕ್ಷದ ಬೆಂಬಲವಿರುತ್ತದೆ ಎಂದು ಹೇಳಿದರು.

ನಮಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಇಲ್ಲ. ಅಭಿವೃದ್ಧಿಯ ವಿಚಾರಗಳೇ ಚರ್ಚೆಯಾಗುತ್ತಿಲ್ಲ. ಕೇವಲ ರಾಜಕೀಯಕ್ಕಷ್ಟೇ ಆದ್ಯತೆ ನೀಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಜನತಾದಳದಿಂದ ಬಂದಿದ್ದಾರೆ ಎಂಬುದನ್ನು ಬಹುತೇಕ ಎಂ.ಬಿ.ಪಾಟೀಲ್ ಮರೆತಿದ್ದಾರೆ. ಇದನ್ನು ಮಾಧ್ಯಮಗಳು ನೆನಪಿಸಿವೆ. ನಾನು ಕೂಡ ಜನತಾದಳದಲ್ಲಿದ್ದೆ. ನನ್ನನ್ನು ಕಾಂಗ್ರೆಸ್ಗೆ ಮತ್ತು ಬಿಜೆಪಿಗೆ ಯಾರು ಕರೆದರು ಎಂದು ಗೊತ್ತಿದೆ. ಈ ಬಗ್ಗೆ ಬಹಿರಂಗ ಚರ್ಚೆ ಮಾಡಿದರೆ ಅದು ಬೇರೆ ರಾಜಕಾರಣವಾಗುತ್ತದೆ. ನನಗೆ ಆಹ್ವಾನ ನೀಡಿದವರ ಆತಸಾಕ್ಷಿಗೆ ಗೊತ್ತಿದೆ. ಅಷ್ಟು ಸಾಕು ಎಂದರು.

ನನಗೆ ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರಕ್ಕೆ ಹೋದರೂ ಮರ್ಯಾದೆ ಕೊಟ್ಟಿದ್ದಾರೆ. ಅದಕ್ಕೆ ಚಿರ ಋಣಿ. ಹಾಗೆ ನೋಡಿದರೆ ಕ್ಷೇತ್ರದ ಜನರಿಗೆ ನನ್ನಿಂದ ಅನ್ಯಾಯವಾಗಿದೆ. ಕಾಂಗ್ರೆಸ್ನಲ್ಲಿ ಹಲವು ಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳಿರುವುದರಲ್ಲಿ ತಪ್ಪಿಲ್ಲ. ಎಲ್ಲಾ ಪಕ್ಷಗಳಲ್ಲೂ ಇದು ಸಹಜ. ಬಿಜೆಪಿಯಲ್ಲಿ ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಅದರ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ ಎಂದು ಹೇಳಿದರು.

ನಾನು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಪತ್ರಿಕಾಗೋಷ್ಠಿ ನಡೆಸಿದ್ದೆ. ಅಲ್ಲಿ ಹೇಳಿದ ವಿಚಾರಗಳನ್ನು ಬಿಟ್ಟು, ರಾಜಕೀಯವಾಗಿಯೇ ಹೆಚ್ಚು ಚರ್ಚೆ ಮಾಡಲಾಗುತ್ತದೆ. ನನಗೆ ಅಭಿವೃದ್ಧಿ ವಿಚಾರಗಳಷ್ಟೇ ಮುಖ್ಯ. ರಾಜಕೀಯ ಚರ್ಚೆಯ ವಿಷಯವಲ್ಲ ಎಂದರು.

RELATED ARTICLES

Latest News