ಬೆಂಗಳೂರು, ಮಾ.7- ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ಮಂಡನೆ ವೇಳೆ ಹಲವಾರು ಕವಿಗಳು, ದಾರ್ಶನಿಕರು, ಚಿಂತಕರ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.
ಪ್ರಮುಖವಾಗಿ ರಾಷ್ಟ್ರಕವಿ ಕುವೆಂಪು, ಗೋಪಾಲಕೃಷ್ಣ ಅಡಿಗ, ಕೆ.ಎಸ್.ನಿಸ್ಸಾರ್ ಅಹಮ್ಮದ್, ಕುಮಾರವ್ಯಾಸ, ಬಸವಣ್ಣ, ವಚನಕಾರ ನುಲಿಯ ಚಂದಯ್ಯ, ಸಾವಿತ್ರಿ ಬಾಯಿಪುಲೆ, ಡಾ.ಬಿ.ಆರ್.ಅಂಬೇಡ್ಕರ್, ಡಾ.ಮನೋಹರ ಲೋಹಿಯಾ, ವಿಲ್ಸನ್ ಕಟೀಲ್ ಸೇರಿದಂತೆ ಹಲವು ಮಹನೀಯರ ಹೆಸರುಗಳನ್ನು ಉಲ್ಲೇಖ ಮಾಡಿದ್ದಾರೆ.
ಪ್ರಾರಂಭದಲ್ಲೇ ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕುವೆಂಪು ಅವರ ನಮ್ಮ ಕೈ ಬುಟ್ಟಿಯಲ್ಲಿ ಸಿಡಿಲ ಗೂಡಿಹಿದು ಹುಡುಕಿ ನೋಡಿದರಲ್ಲಿ ಸುಮದ ಬೀಡಿಹುದು ಎಂದು ಉಲ್ಲೇಖಿಸಿದ್ದಾರೆ.
ಅದೇ ರೀತಿ ಗೋಪಾಲಕೃಷ್ಣ ಅಡಿಗ ಅವರ, ಇರುವುದೆಲ್ಲವನು ಎಲ್ಲ ಜನಕೆ ತೆರವಾಗಿಸುವ, ಸಮಬಗೆಯ ಸಮಸುಖದ ಸಮದುಃಖದ, ಸಾಮರಸ್ಯದ ಸಾಮಗಾನ ಲಹರಿಯ ಮೇಲೆ, ತೇಲಿ ಬರಲಿದೆ ನೋಡು. ನಮ್ಮ ನಾಡು ಎಂದು ಹೇಳಿದ್ದಾರೆ.
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂದ ಪಸರಿಸುವುದು ಆ ಕೃಷಿಯನುದ್ಯೋಗಿಸುವ ಜನವನು ಪಾಲಿಸುವುದು ಎಂಬ ಕುಮಾರವ್ಯಾಸರ ವಾಕ್ಯವನ್ನು ಉಲ್ಲೇಖಿಸಿದ್ದಾರೆ. ಖ್ಯಾತ ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ನಿತ್ಯೋತ್ಸವ ಹಾಡಿನ ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ, ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ, ಈವತ್ಸರ ನಿರ್ಮತ್ಸರ ಮನದುದಾ ಮಹಿಮೆಯೆ ಎಂಬ ಹಾಡನ್ನು ಉಲ್ಲೇಖಿಸಿದ್ದಾರೆ.
ವಿಲ್ಸನ್ ಕಟೀಲ್ ಅವರ ಹಾ! ಗಂಟಲು ಒಣಗಿದೆ!! ತಕೋ ಈ ಬಂಗಾರದ ಸರಪಳಿ ಬದಲಾಗಿ ಒಂದು ಗುಟುಕು ನೀರು ಕೊಡು ಎಂಬ ವಾಕ್ಯವನ್ನು ಪ್ರಸ್ತಾಪಿಸಿದ್ದಾರೆ. ಇದೇ ರೀತಿ ಖ್ಯಾತ ಶಿಕ್ಷಣ ತಜ್ಞೆ ಸಾವಿತ್ರಿಭಾಯಿ ಫುಲೆ ಅವರ ಶೋಷಿತರ, ಬಹಿಷ್ಕೃತರ ಕಣ್ಣೀರನ್ನು ತೊಡೆದು ಹಾಕಿ ಜಾತಿ ವ್ಯವಸ್ಥೆ ಸಂಕೋಲೆಯನ್ನು ಮುರಿದು ಶಿಕ್ಷಣ ಪಡೆದುಕೋ ಎಂಬ ಮಾತನ್ನು ಸ್ಮರಿಸಿದ್ದಾರೆ.
ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ, ರಾಷ್ಟ್ರವು ತನ್ನ ಅರ್ಧದಷ್ಟಿರುವ ಮಹಿಳೆಯರನ್ನು ಆರ್ಥಿಕವಾಗಿ ನಿಷ್ಕ್ರಿಯವಾಗಿಸಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಅವರನ್ನು
ಆರ್ಥಿಕವಾಗಿ ಸ್ವತಂತ್ರರನ್ನಾಗಿಸದೆ ಮಾಡುವ ಎಲ್ಲಾ ಅಭಿವೃದ್ಧಿ ಮಾದರಿಗಳು ಟೊಳ್ಳಾಗಿರುತ್ತವೆ ಎಂಬುದನ್ನು ಹೇಳಿದ್ದಾರೆ.
ಡಾ.ರಾಮ್‌ಮನೋಹರ್ ಲೋಹಿಯಾ ಅವರ ಹೇಳಿಕೆಯನ್ನು ಉಲ್ಲೇಖ ಮಾಡಿರುವ ಸಿಎಂ, ಸಮಾಜವು ತಮ್ಮ ಅಸಹಾಯಕ ಸದಸ್ಯರ ಕುರಿತು ತೋರುವ ಕಾಳಜಿಯು ನಾಗರಿಕತೆಯ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.
ಗುರುವಾದರೂ ಕಾಯಕದಿಂದಲೇ ಜೀವನಮುಕ್ತಿ ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು ಜಂಗಮವಾದರೂ ಕಾಯಕದಿಂದಲೇ ವೇಷಪಾಶಹರಿವುದು ಎಂಬ ನುಲಿಯ ಚಂದಯ್ಯನವರ ವಚನವನ್ನು ಸಿಎಂ ವಾಚಿಸಿದರು.