ಬೆಂಗಳೂರು,ಸೆ.27- ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ಒಂದೇ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯದೇ ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಕಲ್ಪಿಸಬೇಕೆಂದು ಮಾಜಿ ಸಚಿವ ಹಾಗೂ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಸಾರ್ವಜನಿಕ ಜೀವನದಲ್ಲಿರುವ ಅವರಿಗೆ ದೇಶದ ಕಾನೂನು ಬಗ್ಗೆ ಗೌರವವಿದ್ದರೆ ಒಂದೇ ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಇರಬಾರದು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದೆ. ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ, ಆಡಳಿತ ಶೂನ್ಯ, ಸರ್ಕಾರದ ಅಧಿಕಾರಿಗಳ ಆತಹತ್ಯೆ ಇಷ್ಟೇ ಆಗುತ್ತಿದೆ. ಭ್ರಷ್ಟ ಕಾಂಗ್ರೆಸ್ ಪ್ರಾಮಾಣಿಕ ಆಡಳಿತ ನೀಡುವುದಾಗಿ ಹೇಳುತ್ತಿದ್ದಾರೆ. ಇವರು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಗಳು. ಅವರ ವಿಚಾರದಲ್ಲಿ ಯಾವುದೂ ಸ್ಪಷ್ಟತೆ ಇಲ್ಲ ಎಂದು ಕಿಡಿಕಾರಿದರು.
ಮಹರ್ಷಿ ವಾಲೀಕಿಯಿಂದ ಆರಂಭವಾಗಿ, ಇತ್ತೀಚಿನವರೆಗೂ ಭ್ರಷ್ಟಾಚಾರ ಆಗಿದೆ. ಶೇ.100 ಭ್ರಷ್ಟಾಚಾರ ಮಾಡಿರುವುದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಭೂಮಿ ಕಬಳಿಕೆ ಮಾಡಿರುವುದು ಸ್ಪಷ್ಟವಾಗಿದೆ. ಏನೇ ಹೇಳಿದರೂ ನಾವು ಮಾಡಿಲ್ಲ ಅಂತಿದ್ದಾರೆ. ಇವರ ಭ್ರಷ್ಟಾಚಾರ ಸಂಪೂರ್ಣವಾಗಿ ಬಯಲಿಗೆ ಬಂದಿದೆ. ಕೋರ್ಟಲ್ಲಿ ಎಲ್ಲವೂ ಬಯಲಾಗಿದೆ. ಸಾಮಾನ್ಯ ಜನರಿಗೂ ಇದು ಅರ್ಥ ಆಗಿದೆ ಎಂದರು.
ಏನೆಲ್ಲಾ ಕ್ರಮ ಆಗಬೇಕು ಎಂದು ರಾಜ್ಯಪಾಲರು ಸೂಚಿಸಿದ್ದರೂ ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ. ಕೋರ್ಟ್ ಕೂಡ ಇವರ ತಪ್ಪು ಏನೆಂದು ತಿಳಿಸಿದೆ. ಜಮೀನು ಹೇಗೆ ಕೈ ಬದಲಾವಣೆ ಆಗಿದೆ ಎಂಬುದರ ಬಗ್ಗೆ ಸಂಪೂರ್ಣ ದಾಖಲೆ ಇದೆ. ಅಧಿಕಾರ ಹೇಗೆ ದುರ್ಬಳಕೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇಷ್ಟೆಲ್ಲಾ ಆದರೂ ರಾಜೀನಾಮೆ ಕೊಡಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರವನ್ನು ಕಾಂಗ್ರೆಸ್‌ಮಯ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಏನೇ ಕೇಳಿದರೂ ಉತ್ತರ ಇಲ್ಲ. ರಾಜ್ಯಪಾಲರಿಗೆ ಚೀಫ್ ಸೆಕ್ರೆಟರಿ ಉತ್ತರ ಕೊಡುವಂತಿಲ್ಲ, ಡಿಜಿಪಿ ಮೇಲೆ ನಂಬಿಕೆ ಇಲ್ಲ. ಕ್ಯಾಬಿನೆಟ್ ನಲ್ಲಿ ಅಳೆದು ತೂಗಿ ಉತ್ತರ ಕೊಡುತ್ತೇ ಎನ್ನುತಾರೆ. ರಾಜ್ಯಪಾಲರಿಗೆ ಮಾಹಿತಿ ಕೊಡುವುದಿಲ್ಲ ಎಂಬುದು ಕಾಂಗ್ರೆಸ್ ಆಡಳಿತಾನಾ? ಮುಖ್ಯ ಕಾರ್ಯದರ್ಶಿ, ಅಧಿಕಾರಿಗಳನ್ನು ರಾಜ್ಯಪಾಲರು ನೇಮಕ ಮಾಡ್ತಾರಾ ಎಂದು ಪ್ರಶ್ನಿಸಿದರು.
ಮಾಜಿ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೋಳಿವಾಡ ಅವರಿದ ಆರಂಭವಾಗಿ ಸಂತೋಷ್ ಹೆಗ್ಡೆ ಅವರು ಹೇಳಿದ್ದಾರೆ. ಫೇರ್ ಅಂಡ್ ಇಂಪಾರ್ಷಲ್ ಆಗಿ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯ ಅವರ ಮಾತು, ಅವರೇ ಕೇಳಲ್ಲ ಅಂದರೆ ಹೇಗೆ ಎಂದು ವ್ಯಂಗ್ಯವಾಡಿದರು.