ಬೆಂಗಳೂರು,ಜು.20- ರಾಜಕೀಯ ಪ್ರಭಾವದಿಂದ ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾದ ಬದಲಿ ನಿವೇಶನಗಳ ಹಂಚಿಕೆಯ ಕಾರ್ಯದಲ್ಲಿ 40 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತಿತರ ಅವರ ಕುಟುಂಬದ ವರ್ಗದವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಸಿದ್ಧರಾಮಯ್ಯ ಅವರ ಪತ್ನಿ ಬಿ. ಎಂ. ಪಾರ್ವತಿ, ಬಾವಮೈದುನ ಬಿ. ಎಂ. ಮಲ್ಲಿಕಾರ್ಜುನ ಸ್ವಾಮಿ, ಮೂಡಾ ಮಾಜಿ ಅಧ್ಯಕ್ಷರುಗಳಾದ ಬಸವೇಗೌಡ, ಹೆಚ್. ವಿ. ರಾಜೀವ್ ಮತ್ತು ಅಂದಿನ ಆಯುಕ್ತರಾಗಿದ್ದ ಡಿ. ಬಿ. ನಟೇಶ್ ರವರುಗಳ ವಿರುದ್ಧವೂ ಸಹ ದೂರು ದಾಖಲು. ಆರೋಪಕ್ಕೆ ಅಗತ್ಯವಿರುವ ಎಲ್ಲಾ 383 ಪುಟಗಳ ದಾಖಲೆಗಳೊಂದಿಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಇಂದು ಲೋಕಾಯುಕ್ತ ಕಚೇರಿಗೆ ತೆರಳಿ ಸಿಎಂ ವಿರುದ್ಧ ದೂರು ನೀಡಿದ್ದಾರೆ.
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ತನ್ನ ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು 1997 ರಂದು ಮೈಸೂರು ತಾಲ್ಲೂಕು ಕಸಬಾ ಹೋಬಳಿಯ ಕೆಸರೆ ಗ್ರಾಮ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನೂರಾರು ಎಕರೆ ಜಮೀನುಗಳನ್ನು ಭೂಸ್ವಾಧಿ„ೀನ ಮಾಡಿಕೊಂಡಿರುತ್ತದೆ. ಇದರ ಪೈಕಿ ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ಜಾಗವನ್ನು ಅದರ ಮಾಲೀಕ ನಿಂಗ ಬಿನ್ ಜವರ ಅವರಿಂದ ಭೂಸ್ವಾಧಿನ ಪಡಿಸಿಕೊಂಡು, ಪರಿಹಾರದ ರೂಪದಲ್ಲಿ 3,24,700 ರೂ.ಗಳನ್ನು ಸದರಿ ಮಾಲೀಕರಿಗೆ ಬಿಡುಗಡೆ ಮಾಡಿರುತ್ತದೆ.
ಅದಾದ ನಂತರ 1998 ರಂದು ನಗರಾಭಿವೃದ್ಧಿ ಇಲಾಖೆಯು ಸದರಿ ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತೀರ್ಣದ ಜಾಗವನ್ನು ಭೂಸ್ವಾಧಿ„ೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವಆದೇಶವನ್ನು ಹೊರಡಿಸುತ್ತದೆ. ಈ ಅವಧಿಯಲ್ಲಿ ಸಿದ್ಧರಾಮಯ್ಯನವರು ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿರುತ್ತಾರೆ ಹಾಗೂ ಅವರ ಅತ್ಯಾಪ್ತರಾಗಿರುವ ಬಸವೇಗೌಡ ಅವರು ಮೂಡಾ ಅಧ್ಯಕ್ಷರಾಗಿರುತ್ತಾರೆ.
2004 ರಂದು ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತಿರ್ಣದ ಸ್ವತ್ತಿನ ಮಾಲೀಕರಾದ ನಿಂಗ ಬಿನ್ ಜವರ ಎಂಬುವವರ ಮಗನಾದ ಒ. ದೇವರಾಜು ಅವರಿಂದ ಸಿದ್ಧರಾಮಯ್ಯನವರ ಭಾವಮೈದುನ (ಪತ್ನಿಯ ಸಹೋದರ) ಮಲ್ಲಿಕಾರ್ಜುನ ಸ್ವಾಮಿ ಬಿನ್ ಮರಿಲಿಂಗಯ್ಯ ನವರು ಕ್ರಯಕ್ಕೆ ಪಡೆದು ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಳ್ಳುತ್ತಾರೆ. 2005 ರಂದು ಸದರಿ ಜಮೀನನ್ನು ವ್ಯವಸಾಯ ಪ್ರದೇಶದಿಂದ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲಾಗುತ್ತದೆ.
ಆದರೆ, ಸದರಿ ಜಮೀನಿನ ಮಾಲೀಕರಾದ ನಿಂಗ ಬಿನ್ ಜವರ ರವರು ಮರಣ ಹೊಂದಿದ್ದರೂ ಸಹ ಅವರ ಹೆಸರಿನಲ್ಲಿಯೇ ಜಿಲ್ಲಾಧಿಕಾರಿಗಳ ಕಛೇರಿಯಿಂದ ಭೂ ಪರಿವರ್ತನೆ ಮಾಡಲಾಗಿರುತ್ತದೆ. ಈ ಅವಧಿಯಲ್ಲಿ ಸಿದ್ಧರಾಮಯ್ಯನವರು (2004 ರಿಂದ 2006) ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
2010 ರಂದು ಸಿದ್ಧರಾಮಯ್ಯನವರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರು ಸದರಿ ಸ್ವತ್ತನ್ನು ತಮ್ಮ ಸಹೋದರಿ ಪಾರ್ವತಿ (ಸಿದ್ಧರಾಮಯ್ಯನವರ ಧರ್ಮಪತ್ನಿ) ಯವರ ಹೆಸರಿಗೆ ದಾನ ಪತ್ರದ ಮೂಲಕ ದಾನವಾಗಿ ನೀಡುತ್ತಾರೆ. ದಾನ ಪತ್ರದ ಮೂಲಕ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಬಂದಿದ್ದ ಸ್ವತ್ತಿಗೆ ಬದಲಾಗಿ, ಈಗಾಗಲೇ ಅಭಿವೃದ್ಧಿಯಾಗಿರುವ ಮೂಡಾದ ಇನ್ನೊಂದು ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ 2014 ರಲ್ಲಿ ಪಾರ್ವತಿಯವರು ಅರ್ಜಿ ಸಲ್ಲಿಸುತ್ತಾರೆ.
ಪಾರ್ವತಿಯವರ ಅರ್ಜಿಯನ್ನು ಪುರಸ್ಕರಿಸಿದ ನಗರಾಭಿವೃದ್ಧಿ ಇಲಾಖೆಯು ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಬಗ್ಗೆ ಅನುಮೋದನೆ ನೀಡಿ ಸರ್ಕಾರಿ ಆದೇಶವನ್ನು ಹೊರಡಿಸುತ್ತದೆ 2017ರ ಡಿಸಂಬರ್‍ನಲ್ಲಿ ಮೂಡಾದಲ್ಲಿ ನಡೆದ ಪ್ರಾ„ಕಾರದ ಸಭೆಯಲ್ಲಿ (ವಿಷಯದ ಸಂಖ್ಯೆ – 30) ಅರ್ಜಿದಾರರಿಗೆ ಈಗಾಗಲೇ ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತುಗಳನ್ನು ನಿವೇಶನಗಳ ರೂಪದಲ್ಲಿ ಮಂಜೂರು ಮಾಡುವ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ.
ಮಾರುಕಟ್ಟೆ ಬೆಲೆ ಪ್ರತಿ ಚ. ಅಡಿಗೆ ?. 5,000/- ಗಳಷ್ಟು ಇರುವ ಮೈಸೂರಿನ ದೇವನೂರು 3ನೇ ಹಂತದ ಬಡಾವಣೆ ಯಲ್ಲಿನ ನಿವೇಶನಗಳ ಬದಲಾಗಿ ಪ್ರತಿ ಚ. ಅಡಿಗೆ ?. 12,000/- ಗಳಿಗಿಂತಲೂ ಹೆಚ್ಚಿರುವ ಮೈಸೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ವಿಜಯನಗರ 03 ಮತ್ತು 04ನೇ ಹಂತದ ಬಡಾವಣೆಗಳಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ 14 ನಿವೇಶನಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಪಾರ್ವತಿಯವರ ಹೆಸರಿಗೆ 2021-2022 ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ.
2022ರಲ್ಲಿ ಮೂಡಾ ಅಧ್ಯಕ್ಷರಾಗಿದ್ದ ರಾಜೀವ್ ಮತ್ತು ನಟೇಶ್ ರವರು ಸಿದ್ಧರಾಮಯ್ಯನವರ ಧರ್ಮಪತ್ನಿ ಪಾರ್ವತಿ ಅವರ ಹೆಸರಿಗೆ ಮೈಸೂರಿನ ಅತ್ಯಂತ ಪ್ರತಿಷ್ಠಿತ ವಿಜಯನಗರ ಬಡಾವಣೆ 03ನೇ ಹಂತ ಮತ್ತು 04ನೇ ಹಂತದ ಪ್ರದೇಶಗಳಲ್ಲಿ 1) 50 80 ಅಳತೆಯ 05 ನಿವೇಶನಗಳು 2) 40 60 ಅಳತೆಯ 05 ನಿವೇಶನಗಳು 3) 30 50 ಅಳತೆಯ 02 ನಿವೇಶನಗಳು ಮತ್ತು 4) 30 40 ಅಳತೆಯ 02 ನಿವೇಶನಗಳು ಸೇರಿದಂತೆ ಒಟ್ಟು 14 ನಿವೇಶನಗಳನ್ನು ಹಂಚಿಕೆ ಮಾಡಿ ನೋಂದಣಿ ಮಾಡಿಕೊಡುತ್ತಾರೆ.
ನಗರಾಭಿವೃದ್ಧಿ ಇಲಾಖೆಯ ನಿಯಮಗಳನ್ವಯ – ಯಾವ ಬಡಾವಣೆಯ ನಿರ್ಮಾಣಕ್ಕೆಂದು ಪ್ರಾಧಿಕಾರವು ಸ್ಥಳೀಯರ ಸ್ವತ್ತುಗಳನ್ನು ಭೂಸ್ವಾಧಿ„ೀನ ಪಡಿಸಿಕೊಳ್ಳುತ್ತದೆಯೋ, ಅಂತಹ ಸ್ವತ್ತುಗಳ ಮಾಲೀಕರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಅಥವಾ ಆ ಬಡಾವಣೆಯ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸುವ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಬಹುದಾಗಿರುತ್ತದೆ. ಆದರೆ, ಎಂತಹ ಸಂದರ್ಭದಲ್ಲಿಯೂ ಸಹ ಉದ್ದೇಶಿತ ಬಡಾವಣೆಯ ನಿವೇಶನಗಳಿಗೆ ಬದಲಾಗಿ, ಆ ಬಡಾವಣೆಗಿಂತಲೂ ಮುಂಚಿತವಾಗಿ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಅಪರಾಧವಾಗಿರುತ್ತದೆ.
ಆದರೆ, ಈ ಪ್ರಕರಣದಲ್ಲಿ ಪಾರ್ವತಿಯವರಿಗೆ ವಾಸ್ತವವಾಗಿ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಬದಲಾಗಿ, ಅದಕ್ಕಿಂತಲೂ ಹತ್ತಾರು ವರ್ಷಗಳ ಹಿಂದೆಯೇ ಮೂಡಾ ಅಭಿವೃದ್ಧಿ ಪಡಿಸಿರುವ ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿನ ಅತ್ಯಂತ ಆಯಕಟ್ಟಿನ ಸ್ಥಳಗಳಲ್ಲಿರುವ ದುಬಾರಿ ನಿವೇಶನಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ ಎಂದು ರಮೇಶ್ ಅವರು ಗಂಭೀರ ಆರೋಪ ಮಾಡಿದ್ದಾರೆ.