ಬೆಂಗಳೂರು, ನ.14- ಬಿಹಾರ ವಿಧಾನಸಭೆ ಚನಾವಣೆಯಲ್ಲಿ ಮತಗಳ್ಳತನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಹಾರಕ್ಕೆ ಹೋಗಿರಲಿಲ್ಲ. ಕಾಂಗ್ರೆಸ್ ನೇತೃತ್ವದ ಮಹಾ ಘಟ್ ಬಂಧನ್‌ಗೆ ಏಕೆ ಹಿನ್ನೆಡೆಯಾಗಿದೆ, ಯಾರು ಮತ ಹಾಕಿಲ್ಲ, ಎನ್‌ಡಿಎಗೆ ಅಷ್ಟು ದೊಡ್ಡ ಬಹುಮತ ಏಕೆ ಬಂತು ಎಂಬುವುದು ತಮಗೆ ಗೊತ್ತಿಲ್ಲ. ಮಾಹಿತಿ ತಿಳಿದುಕೊಂಡು ಪ್ರತಿಕ್ರಿಯಿಸುತ್ತೇನೆ ಎಂದರು.
ಎನ್‌ಡಿಎಗೆ ಗೆಲುವಾಗಿದೆ. ಜನರ ತೀರ್ಪನ್ನು ಒಪ್ಪಿಕೊಳ್ಳಲೇಬೇಕು. ಹಿಂದುಳಿದ ವರ್ಗಗಳ ಮತಗಳು ಕಾಂಗ್ರೆಸ್ ಕೈ ಹಿಡಿಯದೇ ಇರುವ ಬಗ್ಗೆ ಹೆಚ್ಚಿನ ವಿವರ ಗೊತ್ತಿಲ್ಲ. ಬಿಹಾರದಲ್ಲಿ ಮುಖ್ಯಮಂತ್ರಿಯಾಗಿದ್ದ ನಿತೀಶ್‌ಕುಮಾರ್ ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರು. ಮತಗಳ್ಳತನ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಿತ್ತು. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತ ಚೋರಿಯಾಗಿದೆ ಎಂದು ಹೇಳಿದರು.
ಪ್ರತಿಭಟನೆ ಕೈಬಿಡಲು ಮನವಿ:
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ರೈತರು ತಾವು ಬೆಂಕಿ ಹಚ್ಚಿಲ್ಲ ಎಂದು ಹೇಳುತ್ತಿದ್ದಾರೆ. ಯಾರು ಬೆಂಕಿ ಹಚ್ಚಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ರೈತರ ಪ್ರತಿಭಟನೆ ಹೆಸರಿನಲ್ಲಿ ಕೆಲವು ರಾಜಕೀಯ ಪಿತೂರಿಗಳು ನಡೆಯುತ್ತಿವೆ. ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಹೀಗಾಗಿ ಇಂತಹ ಪ್ರತಿಭಟನೆಗಳಿಗೆ ಕುಮಕ್ಕು ನೀಡುತ್ತಿರುತ್ತಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 3,300 ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ. ಮುಧೋಳ ತಾಲ್ಲೂಕಿನ ರೈತರು ಕೂಡ ಸರ್ಕಾರದ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಚಳವಳಿಯನ್ನು ವಾಪಸ್ ಪಡೆಯಬೇಕು. ಈ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದುಎಂದರು.
