ಹುಬ್ಬಳ್ಳಿ,ಡಿ.17- ಮುಖ್ಯಮಂತ್ರಿಯನ್ನು ಭೇಟಿ ಮಾಡಲಿ ಪ್ರಧಾನಿಯವರು ಸಮಯ ಕೊಡುವುದಿಲ್ಲ ಎಂದರೆ ಒಕ್ಕೂಟ ವ್ಯವಸ್ಥೆಗೆ ಬೆಲೆ ಇದೆಯೇ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಿಂದ ಸಂಗ್ರಹವಾಗುವ 4.50 ಲಕ್ಷ ಕೋಟಿ ತೆರಿಗೆಯಲ್ಲಿ ಕರ್ನಾಟಕಕ್ಕೆ ವಾಪಸ್ ನೀಡುತ್ತಿರುವುದು ಕೇವಲ 50 ಸಾವಿರ ಕೋಟಿ ರೂ.ಗಳು ಮಾತ್ರ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರನ್ನು ಭೇಟಿ ಮಾಡಲು ತಾವು ನಾಳೆ ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು. ಕಳೆದ ನವೆಂಬರ್ 27 ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ರಾಜ್ಯದ ಬರಪರಿಸ್ಥಿತಿ ಕುರಿತು ನಿಮ್ಮೊಂದಿಗೆ ಚರ್ಚೆ ಮಾಡಬೇಕು, ಅದಕ್ಕಾಗಿ ಸಮಯ ನೀಡುವಂತೆ ಮನವಿ ಮಾಡಿದ್ದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈವರೆಗೂ ಭೇಟಿಗೆ ಸಮಯ ಸಿಕ್ಕಿಲ್ಲ. ಮುಖ್ಯಮಂತ್ರಿಗೇ ಈ ಪರಿಸ್ಥಿತಿ ಇದೆ ಎಂದರೆ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಶೆಟ್ಟರ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ
ನಮ್ಮದು ಒಕ್ಕೂಟ ವ್ಯವಸ್ಥೆ. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಮಯ ನೀಡುತ್ತಿಲ್ಲ ಎಂದರೆ ಏನರ್ಥ? ನಮ್ಮ ರಾಜ್ಯದ ಸಚಿವರಾದ ಕೃಷ್ಣಭೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಕೂಡ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರ ಭೇಟಿಗೆ ಸಮಯ ಕೇಳಿದ್ದರು. ನನಗೂ ಸಮಯ ಕೊಡಲಿಲ್ಲ, ಅವರಿಗೂ ಅವಕಾಶ ಸಿಗಲಿಲ್ಲ. ಇಂತಹ ವಿಷಯಗಳ ಚರ್ಚೆಯೇ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬರಪರಿಸ್ಥಿತಿಯಿಂದ ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ 33 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರ 18 ಸಾವಿರ ಕೋಟಿ ರೂ. ಪರಿಹಾರ ನೀಡಬೇಕಿದೆ. ಅದರಲ್ಲಿ ಬೆಳೆ ನಷ್ಟ ಪರಿಹಾರ 4660 ಕೋಟಿ ರೂ. ನಷ್ಟವಾಗಿದೆ ಎಂದರು. ಎನ್‍ಡಿಆರ್‍ಎಫ್ ದುಡ್ಡು ಕೇಂದ್ರ ಸರ್ಕಾರದ್ದಲ್ಲ. ರಾಜ್ಯದ ದುಡ್ಡು. ರಾಜ್ಯಗಳಿಂದ ಸಂಗ್ರಹಿಸಲಾದ ದುಡ್ಡನ್ನೇ ಅದರಲ್ಲಿ ಮೀಸಲಿಡಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ಅತೀ ಹೆಚ್ಚು ತೆರಿಗೆ ಸಂಗ್ರಹಿಸುವ ಎರಡನೇ ರಾಜ್ಯ. ನಮ್ಮಿಂದ ವಾರ್ಷಿಕ 4 ಲಕ್ಷ ಕೋಟಿಗೂ ಅಧಿಕ ಮೊತ್ತದ ತೆರಿಗೆ ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ ತೆರಿಗೆಯ ಪಾಲು ಎಂದು ಈ ವರ್ಷ 37 ಸಾವಿರ ಕೋಟಿ ರೂ. ಮತ್ತು ಕೇಂದ್ರದ ಪ್ರಾಯೋಜಿತ ಯೋಜನೆಯಡಿ 13 ಸಾವಿರ ಕೋಟಿ ರೂ. ಸೇರಿ 50 ಸಾವಿರ ಕೋಟಿ ರೂ. ಮಾತ್ರ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.
ಈ ವಾಸ್ತವಾಂಶಗಳನ್ನು ಹೇಳಿದರೆ ಬಿಜೆಪಿಯವರು ಜಗಳಕ್ಕೆ ಬರುತ್ತಾರೆ. ನಮ್ಮ ದುಡ್ಡು ಎಂದು ವಾದ ಮಾಡುತ್ತಾರೆ. ಇದು ರಾಜ್ಯದ ದುಡ್ಡು. ಕನ್ನಡಿಗರ ತೆರಿಗೆಯ ಹಣ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. 4 ಲಕ್ಷ ಕೋಟಿ ರೂ. ಸಂಗ್ರಹಿಸಿ ಎಷ್ಟು ವಾಪಸ್ ಕೊಡುತ್ತಿದ್ದಾರೆ. ಬಿಜೆಪಿಯವರು, ಪ್ರಧಾನಿಯವರು ಬರೀ ಭಾಷಣ ಹೊಡಿಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.