ಬೆಂಗಳೂರು, ನ.8- ಮಹಾರಾಷ್ಟ್ರ, ಕರ್ನಾಟಕ, ಹರಿಯಾಣದಲ್ಲಿ ಮತಗಳ್ಳತನ ನಡೆದಿದೆ. ಈಗ ಬಿಹಾರದಲ್ಲೂ ನಡೆಯುತ್ತಿದೆ. ಇಷ್ಟೆಲ್ಲಾ ನಡೆದರೂ ಚುನಾವಣಾ ಆಯೋಗ ತನಿಖೆ ನಡೆಸದೆ ಬೇಜವಾಬ್ದಾರಿಯಿಂದ ಉತ್ತರ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ಮತಗಳ್ಳತನದ ವಿರುದ್ಧ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನ ಕುರಿತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದೆ.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಸ್ವತಂತ್ರ ಸಂಸ್ಥೆಗಳನ್ನು ನಾಶ ಪಡಿಸುತ್ತಿದ್ದಾರೆ. ಸಿಬಿಐ, ಆದಾಯ ತೆರಿಗೆ, ಇಡಿ ಸೇರಿ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡಬೇಕಿತ್ತು. ಆದರೆ ಇವುಗಳನ್ನು ಕೇಂದ್ರ ಸರ್ಕಾರ ತನ್ನ ಅಡಿಯಾಳುವಿನಂತೆ ದುಡಿಸಿಕೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು. ಬಿಜೆಪಿಯವರು ಕೇವಲ ಸುಳ್ಳಿನಲ್ಲಿ ಮಾತ್ರವಲ್ಲ ಮತಗಳ್ಳತನದಲ್ಲೂ ನಿಸ್ಸೀಮರು ಎನ್ನುವುದು ಸಾಬೀತಾಗಿದೆ. ನಾವು ಇದನ್ನು ಸಹಿಸಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟದ ಮಾರ್ಗ ಹಿಡಿಯುತ್ತೇವೆ ಎಂದರು.
ಬಿಜೆಪಿ ಮತಗಳ್ಳತನದ ಮೂಲಕ ಅನೇಕ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಲೋಕಸಭೆ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ನಿರಂತರ ಅಧ್ಯಯನ, ತಪಾಸಣೆ ಬಳಿಕ ದಾಖಲೆ ಸಮೇತ ಮತಗಳ್ಳತನವನ್ನು ದೇಶದ ಜನರಿಗೆ ಮನವರಿಕೆ ಮಾಡಿಸಿದ್ದಾರೆ ಎಂದು ವಿವರಿಸಿದರು. ಸಂವಿಧಾನಬಾಹಿರವಾಗಿ ಅಧಿಕಾರ ಹಿಡಿಯುವುದು ಸಂವಿಧಾನಕ್ಕೆ ಎಸಗುವ ದ್ರೋಹ. ಪ್ರಜಾಪ್ರಭುತ್ವಕ್ಕೆ ಎಸಗಿದ ವಂಚನೆ. ರಾಹುಲ್ ಗಾಂಧಿಯವರು, ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯಲ್ಲಿ ನಡೆದ ಮತಗಳ್ಳತನವನ್ನು ಸ್ಪಷ್ಟವಾಗಿ, ದಾಖಲೆ ಸಮೇತ ಬಯಲಿಗೆ ಎಳೆದು ದಾಖಲೆಗಳನ್ನು ದೇಶದ ಜನರ ಮುಂದೆ ಇಟ್ಟಿದ್ದಾರೆ. ಇಷ್ಟಾದರೂ ಚುನಾವಣಾ ಆಯೋಗ ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ದೇಶದ ಜನರ ಮುಂದೆ ಇರಿಸಿದ ದಾಖಲೆಗಳಿಗೂ ಉತ್ತರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗಕ್ಕೆ ಸ್ವತಂತ್ರ ಸಂಸ್ಥೆಯ ಸ್ಥಾನಮಾನವನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿದ್ದಾರೆ. ಪ್ರಭುತ್ವ ಚುನಾವಣಾ ಪ್ರಕ್ರಿಯೆಯಲ್ಲಿ ಮೂಗು ತೂರಿಸಬಾರದು ಎನ್ನುವುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು. ಅದಕ್ಕಾಗಿ ಮುಕ್ತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ನಮ ಸಂವಿಧಾನ ರೂಪಿಸಿದೆ. ಸಂವಿಧಾನದ ಮೌಲ್ಯ ಉಳಿಯಬೇಕಾದರೆ ಸ್ವತಂತ್ರ ಚುನಾವಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದು ಎಲ್ಲಾ ಪಕ್ಷಗಳ ಜವಾಬ್ದಾರಿ ಎಂದರು.
ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಹಾಗೂ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಉಳಿಸಲು ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಈಗಾಗಲೇ 1.20 ಕೋಟಿ ಸಹಿ ಸಂಗ್ರಹವಾಗಿದೆ. ನವೆಂಬರ್ 10ರ ವರೆಗೂ ಸಹಿ ಸಂಗ್ರಹ ನಡೆಯಲಿದ್ದು, ಅನಂತರ ದೇಶದ ರಾಷ್ಟ್ರಪತಿ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಸಹಿ ಸಂಗ್ರಹವನ್ನು ಕಳುಹಿಸಲಾಗದು. ಮುಂದೆಯೂ ಈ ಹೋರಾಟ ಮುಂದುವರೆಯಲಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಿ ಸಂಗ್ರಹ ಒಳ್ಳೆಯ ಬೆಳವಣಿಗೆ. ಬಾಕಿ ಇರುವ ಮೂರು ದಿನಗಳಲ್ಲಿ ಇನ್ನಷ್ಟು ಹೆಚ್ಚು ಸಹಿ ಸಂಗ್ರಹ ಮಾಡುವಂತೆ ಶಾಸಕರಿಗೆ, ಸಚಿವರಿಗೆ, ಸಂಸದರಿಗೆ ಮುಖ್ಯಮಂತ್ರಿ ಸೂಚಿಸಿದರು. ಐದು ವರ್ಷಕ್ಕೊಮೆ ಪಡೆಯುವ ಜನಾದೇಶ ಮುಕ್ತ ಹಾಗೂ ನ್ಯಾಯ ಸಮತವಾಗಿರಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಸಚಿವರೂ ಆದ ಸತೀಶ್ ಜಾರಕಿಹೊಳಿ, ಪಕ್ಷದ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಸಲೀಂ ಅಹಮದ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಂಜುನಾಥ್ ಸೇರಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
