ಬೆಂಗಳೂರು,ಮಾ.7- ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಎನ್ನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುದಿನಗಳ ಬೇಡಿಕೆಯಂತೆ ಓಬಿಸಿ ವರ್ಗಕ್ಕೂ ಗುತ್ತಿಗೆಯಲ್ಲಿ ಮೀಸಲಾತಿಯನ್ನು ಘೋಷಿಸಿದ್ದಾರೆ. ಈವರೆಗೂ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೀಮಿತವಾಗಿದ್ದ ಗುತ್ತಿಗೆ ಮೀಸಲಾತಿಯನ್ನು ಹಿಂದುಳಿದ ವರ್ಗಗಳಲ್ಲಿರುವ ಪ್ರವರ್ಗ -1, 2 ಎ ಮತ್ತು 2 ಬಿ ಸಮುದಾಯಗಳಿಗೂ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಗುತ್ತಿಗೆ ಕಾಮಗಾರಿಗಳಲ್ಲಿ 1 ಕೋಟಿ ರೂ. ಬದಲಾಗಿ 2 ಕೋಟಿ ರೂ. ಮೊತ್ತದವರೆಗೂ ವಿಸ್ತರಣೆ ಮಾಡಲಾಗಿದ್ದು, ಓಬಿಸಿ ವರ್ಗಕ್ಕೂ ಈ ಸೌಲಭ್ಯಗಳು ತಲುಪಲಿವೆ. ಸರ್ಕಾರದ ವಿವಿಧ ಇಲಾಖೆ, ನಿಗಮ ಹಾಗೂ ಸಂಸ್ಥೆಗಳಲ್ಲಿ ಖರೀದಿಸುವ ಸರಕು ಸೇವೆಗಳಲ್ಲಿ 1 ಕೋಟಿ ರೂ.ಗಳವರೆಗೂ ಮೀಸಲಾತಿಯನ್ನು ಎಸ್‌ಸಿ/ಎಸ್‌ಟಿ ಮತ್ತು ಓಬಿಸಿ ವರ್ಗಕ್ಕೆ ನೀಡಲಾಗುತ್ತಿದೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಅಗತ್ಯ ಮೂಲ ಸೌಕರ್ಯಗಳಿಗೆ 50 ಕೋಟಿ ರೂ., ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ 30 ಸ್ವಂತ ಕಟ್ಟಡಗಳ ನಿರ್ಮಾಣ, ಕ್ರೈಸ್ ಸಂಸ್ಥೆಯಿಂದ ರಾಜ್ಯದ ಕಂದಾಯ ವಿಭಾಗಗಳಲ್ಲಿ ತಲಾ ಒಂದರಂತೆ ಅಲೆಮಾರಿ ಹಾಗೂ ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ದೇವರಾಜ ಅರಸು ವಸತಿ ಶಾಲೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಗೆ 2 ರಂತೆ 62 ಮೆಟ್ರಿಕ್ ನಂತರದ ವಸತಿ ಶಾಲೆೆಗಳ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಒದಗಿಸುವುದಾಗಿ ತಿಳಿಸಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೂ ಭೂ ಒಡೆತನ ಯೋಜನೆಯನ್ನು ವಿಸ್ತರಿಸಿದ್ದಾರೆ. ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದಾಗಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್, ಕೆಎಸ್‌ಪಿಎಸ್ ಮತ್ತಿತರ ಸ್ಪರ್ಧಾತಕ ಪರೀಕ್ಷೆಗಳಿಗೆ ವಸತಿಸಹಿತ ತರಬೇತಿಗಾಗಿ ಬೆಂಗಳೂರಿನಲ್ಲಿ 2 ಹಾಸ್ಟೆಲ್‌ಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ.
ಕೆಐಡಿಬಿಯಲ್ಲಿ ನಿವೇಶನ ಹಂಚಿಕೆಯಲ್ಲೂ ಹಿಂದುಳಿದ ವರ್ಗಗಳ ಪ್ರವರ್ಗ 1, ಪ್ರವರ್ಗ 2 ಎ ಮತ್ತು 2 ಬಿ ಸಮುದಾಯಗಳಿಗೆ ಶೇ.20 ರಷ್ಟು ಮೀಸಲಾತಿ ಕಲ್ಪಿಸಿದ್ದು, ಪ್ರಾರಂಭಿಕ ಠೇವಣಿ ಬಳಿಕ ಬಾಕಿ ಹಣ ಪಾವತಿಸಲು ಒಂದು ವರ್ಷದ ಕಾಲಾವಕಾಶ ನೀಡುವುದಾಗಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ನಿಗಮಗಳಿಗೆ 442 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಪಸಂಖ್ಯಾತರ ಇಲಾಖೆಯಿಂದ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 250 ಮೌಲಾನಾ ಆಜಾದ್ ಆಂಗ್ಲಮಾಧ್ಯಮ ಮಾದರಿ ಶಾಲೆಗಳಲ್ಲಿ ಹಂತಹಂತವಾಗಿ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯ ಪ್ರಾಥಮಿಕ ಪೂರ್ವ ಹಂತದಿಂದ ಪಿಯುಸಿವರೆಗಿನ ತರಗತಿಗಳನ್ನು ಪ್ರಾರಂಭಿಸಲು 500 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಈ ವರ್ಷ ಇದಕ್ಕಾಗಿ 100 ಕೋಟಿ ರೂ. ಅನುದಾನ ಒದಗಿಸಲಾಗಿದೆ.
100 ಉರ್ದು ಮಾಧ್ಯಮದ ಶಾಲೆಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮಾದರಿಯ ಮೂಲಸೌಲಭ್ಯಗಳನ್ನು ಹೆಚ್ಚಿಸಿ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು 400 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಈ ವರ್ಷ 100 ಕೊಟಿ ರೂ. ಬಿಡುಗಡೆಯಾಗಲಿದೆ.
ಪದವಿ ಪೂರ್ವ ತರಗತಿಗಳನ್ನು ಆರಂಭಿಸಲಾಗಿರುವ 62 ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗ ಪ್ರಾರಂಭಿಸಲಾಗುತ್ತದೆ. ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಗೆ 1 ಸಾವಿರ ಕೋಟಿ ರೂ. ಕ್ರಿಯಾಯೋಜನೆ ತಯಾರಿಸಲಾಗಿದೆ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಔಪಚಾರಿಕ ಶಿಕ್ಷಣ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಪಸಂಖ್ಯಾತ ಯುವಜನರಿಗೆ ನವೋದ್ಯಮ ಪ್ರಾರಂಭಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ.
ವಕ್‌್ಫ ಸಂಸ್ಥೆಗಳ ದುರಸ್ತಿ, ಜೀರ್ಣೋದ್ಧಾರ, ಖಬರ್ ಸ್ಥಾನಗಳಲ್ಲಿ ಮೂಲ ಸೌಕರ್ಯ, ಅಭಿವೃದ್ಧಿ ಹಾಗೂ ಆಸ್ತಿ ಸಂರಕ್ಷಣೆಗೆ 150 ಕೋಟಿ ರೂ. ಒದಗಿಸಲಾಗಿದೆ.25 ಸಾವಿರ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸಮೂಹ ವಿವಾಹ ವೆಚ್ಚಕ್ಕಾಗಿ ಪ್ರತಿ ಜೋಡಿಗೆ 50 ಸಾವಿರ ರೂ. ನೀಡಲು ಯೋಜಿಸಲಾಗಿದೆ.