ಬೆಂಗಳೂರು, ಜೂ.25- ನೆರೆ ರಾಜ್ಯಗಳಿಗೆ ಹೋಲಿಗೆ ಮಾಡಿದರೆ ನಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ ಎಂದು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದರ ಪರಿಷ್ಕರಣೆಯ ಬಗ್ಗೆ ಕೆಎಂಎಫ್ ಜೊತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಕುರಿತು ಯಾವುದೇ ಮಾಹಿತಿ ಇಲ್ಲ. ದರ ಏರಿಕೆ ಕುರಿತು ಕೆ.ಎಂ. ಎಫ್. ತೀರ್ಮಾನಿಸುತ್ತದೆ. ಅದು ಸರ್ಕಾರದ ತೀರ್ಮಾನವಲ್ಲ. ನೆರೆಯ ರಾಜ್ಯಗಳ ದರಕ್ಕೆ ಅನುಗುಣವಾಗಿ ಏರಿಕೆ ಮಾಡಲು ತೀರ್ಮಾನಿಸಿರಬಹುದು. ಈ ಬಗ್ಗೆ ಕೂಡಲೇ ಮಾಹಿತಿ ಪಡೆಯುವುದಾಗಿ ತಿಳಿಸಿದರು. ಜೊತೆ ಕೆಎಂಎಫ್ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದರು.
ರಾಜ್ಯದಲ್ಲಿ ಹಾಲಿನ ಸಂಗ್ರಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಹಾಲಿನ ಪಟ್ಟಣಕ್ಕೆ 50 ಎಂಎಲ್ ಹಾಲನ್ನೂ ಹೆಚ್ಚುವರಿಯಾಗಿ ಸೇರಿಸಿ, ಅದಕ್ಕೆ ತಗಲುವ 2.10 ರೂಪಾಯಿ ವೆಚ್ಚದಲ್ಲಿ 2 ರೂಪಾಯಿಗಳನ್ನು ಗ್ರಾಹಕರಿಂದ ಪಡೆಯಲು ನಿರ್ಧರಿಸಲಾಗಿದೆ. ಇದರಿಂದ ನಷ್ಟವಾಗುವ 10 ಪೈಸೆಯನ್ನು ಹಾಗೂ ಏಜೆಂಟರಿಗೆ ನೀಡಬೇಕಾದ 10 ಪೈಸೆ ಸೇರಿ 20 ಪೈಸೆ ನಷ್ಟವನ್ನು ಕೆಎಂಎಫ್ ಭರಿಸಲಿದೆ ಎಂದು ಅದರ ಅಧ್ಯಕ್ಷ ಭೀಮಾನಾಯಕ್ ತಿಳಿಸಿದ್ದಾರೆ.
ಸಂಗ್ರಹಿಸಿದ ಹಾಲನ್ನು ಪೌಡರ್ ಮಾಡಿ ದಾಸ್ತಾನು ಮಾಡುವುದರಿಂದ ಅದು ನಿರರ್ಥಕ ವೆಚ್ಚವಾಗುತ್ತದೆ. ಸಂಸ್ಥೆಯ ಉಳಿವಿಗೆ ಹೆಚ್ಚುವರಿ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಹಾಲಿನ ಸಂಗ್ರಹ ತಗ್ಗಿದರೆ 50 ಎಂಎಲ್ ಸೇರ್ಪಡೆಯನ್ನು ಹಿಂಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತು ಭೀಮಾನಾಯಕ್ ಅವರು ಮುಖ್ಯಮಂತ್ರಿಯವರಿಗೂ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.