Thursday, January 9, 2025
Homeರಾಜಕೀಯ | Politicsಕುತೂಹಲ ಮೂಡಿಸಿದೆ ಡಿಕೆಶಿ ಅನುಪಸ್ಥಿತಿಯಲ್ಲಿ ನಡೆದ ಸಿದ್ದು ಬಣದ ಔತಣಕೂಟ

ಕುತೂಹಲ ಮೂಡಿಸಿದೆ ಡಿಕೆಶಿ ಅನುಪಸ್ಥಿತಿಯಲ್ಲಿ ನಡೆದ ಸಿದ್ದು ಬಣದ ಔತಣಕೂಟ

cm-siddaramaiah-dinner-party

ಬೆಂಗಳೂರು, ಜ.3– ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ಸಚಿವ ಸಂಪುಟ ಪುನರ್ ರಚನೆ, ಬಜೆಟ್ನಲ್ಲಿ ಘೋಷಿಸಬೇಕಾದ ಹೊಸ ಯೋಜನೆಗಳು ಹಾಗೂ ಬಸ್ ಪ್ರಯಾಣ ದರ ಹಾಗೂ ಇತರ ಬೆಲೆ ಏರಿಕೆಗಳ ಸಮರ್ಥನೆ ಸೇರಿದಂತೆ ಹಲವು ಮಹತ್ವದ ವಿಚಾರಗಳು ನಿನ್ನೆ ನಡೆದ ಔತಣಕೂಟದಲ್ಲಿ ಚರ್ಚೆಯಾಗಿವೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದ ವೇಳೆಯಲ್ಲಿ ಹೊಸ ವರ್ಷಾಚರಣೆಯ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಸಚಿವರು ನಿನ್ನೆ ಸಭೆ ನಡೆಸಿದ್ದು ಔತಣಕೂಟದಲ್ಲೂ ಭಾಗಿಯಾಗಿದ್ದಾರೆ.ಸಚಿವ ಸಂಪುಟ ಸಭೆಯ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ಬಂಗಲೆ ಯಲ್ಲಿ ಸಭೆ ನಡೆಸಲಾಗಿದೆ. ನೂತನ ವರ್ಷದ ಸಂಭ್ರ ಮಾಚರಣೆ ಕಾರಣಕ್ಕೆ ಒಂದೆಡೆ ಸೇರಿದ್ದು, ತಮದೆ, ಆದ ತಂತ್ರಗಾರಿಕೆಯನ್ನು ರೂಪಿಸಲಾಗುತ್ತಿದೆ.

ಕಾಂಗ್ರೆಸ್ನಲ್ಲಿ ಒಬ್ಬ ವ್ಯಕ್ತಿ ಹಾಗೂ ಒಂದು ಹುದ್ದೆ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮುಂದಾಗಿದೆ. ವಿಧಾನಸಭೆ ಚುನಾವಣೆ ಬಳಿಕ ನಡೆದ ಮುಖ್ಯಮಂತ್ರಿ ಆಯ್ಕೆಯ ಸಂಧಾನದ ಭಾಗವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸಿದ್ದು, ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿತ್ತು.

ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಎಂಬುದು ಮಾಡಿದ ಕೆಲಸಕ್ಕೆ ದೊರೆತ ಪ್ರತಿಫಲವಾಗಿದೆ. ಪಕ್ಷ ನಿಷ್ಠೆ ಹಾಗೂ ಅವಿರತವಾಗಿ ಹಗಲಿರುಳು ಚುನಾವಣೆಗಾಗಿ ತನು-ಮನ-ಧನ ಪೂರ್ವಕವಾಗಿ ಶ್ರಮಿಸಿದ್ದಕ್ಕೆ ಕೂಲಿ ಕೊಡಿ ಎಂದು ಹೈಕಮಾಂಡ್ ಮುಂದೆ ಹಕ್ಕು ಪ್ರತಿಪಾದನೆ ಮಾಡಿದ್ದರು. ಆ ವೇಳೆ ಮೌನಕ್ಕೆ ಶರಣಾಗಿದ್ದ ಸಿದ್ದರಾಮಯ್ಯ ಅವರಿಗೆ ರಾಹುಲ್ಗಾಂಧಿ ಅವರ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿ ಹುದ್ದೆ ದೊರೆತಿತ್ತು. ಎರಡೂವರೆ ವರ್ಷಗಳ ಬಳಿಕ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಅಲಿಖಿತ ಚರ್ಚೆಗಳು ಕಾಂಗ್ರೆಸ್ನ ಒಳವಲಯದಲ್ಲಿ ವ್ಯಾಪಕವಾಗಿವೆ.

ಈಗಾಗಲೇ ಎರಡು ವರ್ಷ ಸಮೀಪಿಸುತ್ತಿದ್ದು, ಅಧಿಕಾರ ಹಂಚಿಕೆಯ ಸೂತ್ರ ಜಾರಿಯ ಸಮಯ ಹತ್ತಿರದಲ್ಲಿದೆ ಎಂಬ ಚರ್ಚೆಗಳಾಗುತ್ತಿವೆ. ಈ ಹಂತದಲ್ಲಿ ಸಿದ್ದರಾಮಯ್ಯ ಅವರ ಬಣ ಚುರುಕಾಗಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ಸಚಿವರು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಜಾತಿವಾರು ಉಪಮುಖ್ಯಮಂತ್ರಿ ಹುದ್ದೆಗಳನ್ನು ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ರಾಜಕೀಯವಾಗಿ ಲಾಭವಾಗಲಿದೆ ಎಂದು ಬಹಿರಂಗ ಚರ್ಚೆಗಳು ನಡೆದಿದ್ದವು. ಅದಕ್ಕೆ ಹೈಕಮಾಂಡ್ ಸೊಪ್ಪು ಹಾಕಲಿಲ್ಲ.

ಅನಂತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿಸಿದಷ್ಟು ಸ್ಥಾನಗಳೂ ಸಿಗಲಿಲ್ಲ. ಕಾಂಗ್ರೆಸ್ಗೆ ಮೂಲ ಮತಬ್ಯಾಂಕ್ಗಳಾದ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರಿಗೆ ಕಡ್ಡಾಯವಾಗಿ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಜೊತೆಯಲ್ಲಿ ಮಹಿಳೆಯರು ಮತ್ತು ಲಿಂಗಾಯತ ಸಮುದಾಯವನ್ನು ಪರಿಗಣಿಸಿ ಐದು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಚರ್ಚೆಗಳು ನಡೆದಿದ್ದವು. ಈಗ ಮತ್ತೆ ಅದೇ ಚರ್ಚೆಗೆ ಚಾಲನೆ ನೀಡಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಡಿ.ಕೆ.ಶಿವಕುಮಾರ್ ಬಣದಿಂದ ನಾಯಕತ್ವದ ಬದಲಾವಣೆ ಕುರಿತ ಹೇಳಿಕೆಗಳು ಕೇಳಿ ಬಂದರೆ ಸಿದ್ದರಾಮಯ್ಯ ಬಣ ಒಬ್ಬ ವ್ಯಕ್ತಿ ಒಂದು ಹುದ್ದೆ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತು ಪ್ರತ್ಯಾಸ್ತ್ರ ಹೂಡಲು ಸಿದ್ಧತೆ ನಡೆಸಿದೆ.

ಸಚಿವ ಸಂಪುಟ ಪುನರ್ ರಚನೆಗೆ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಪುನರ್ ರಚನೆಯಾದರೆ ಡಿ.ಕೆ.ಶಿವಕುಮಾರ್ ಬಳಿ ಇರುವ ಜಲಸಂಪನೂಲ ಖಾತೆಯನ್ನು ಕಸಿದುಕೊಳ್ಳಲು ಹಲವು ನಾಯಕರು ಹವಣಿಸುತ್ತಿದ್ದಾರೆ. ಅದಕ್ಕಾಗಿ ಸದ್ಯಕ್ಕೆ ಪುನರ್ ರಚನೆಯ ಪ್ರಸ್ತಾಪವೇ ಬೇಡ ಎಂದು ಹೈಕಮಾಂಡ್ ಮೇಲೆ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ, ಖಾಲಿ ಇರುವ ಒಂದು ಸ್ಥಾನಕ್ಕೆ ಮಾತ್ರ ಸಂಪುಟವನ್ನು ವಿಸ್ತರಣೆ ಮಾಡಿದರೆ ಸಾಕು. ಎರಡೂವರೆ ವರ್ಷಗಳ ಬಳಿಕ ಪುನರ್ ರಚನೆಗೆ ಚಿಂತನೆ ನಡೆಸಬಹುದು ಎಂದು ಪ್ರತಿಪಾದಿಸುತ್ತಿದ್ದಾರೆ ಎನ್ನಲಾಗಿದೆ.

ನಿನ್ನೆ ಸಚಿವ ಸಂಪುಟದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣದರವನ್ನು ಶೇ.15ರಷ್ಟು ಹೆಚ್ಚಿಸಲು ಅಂಗೀಕಾರ ನೀಡಲಾಗಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಲಿದೆ. ಈ ಮೊದಲು ಹಾಲು, ಪೆಟ್ರೋಲ್-ಡೀಸೆಲ್ ಬೆಲೆ, ಮುದ್ರಾಂಕ ಶುಲ್ಕ, ಮದ್ಯದ ಬೆಲೆ ಸೇರಿ ಹಲವು ದರ ಏರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀರು, ಹಾಲು ಹಾಗೂ ಆಸ್ತಿ ತೆರಿಗೆ ಹೆಚ್ಚಳದ ಸಾಧ್ಯತೆಯೂ ಇದೆ. ಬೆಲೆ ಏರಿಕೆಗಳನ್ನು ಅಸ್ತ್ರವನ್ನಾಗಿಸಿಕೊಂಡು ವಿರೋಧ ಪಕ್ಷಗಳು ಜನರನ್ನು ಕೆರಳಿಸುವ ಸಾಧ್ಯತೆ ಇದ್ದು, ಅದಕ್ಕೆ ಪ್ರತಿಯಾಗಿ ತಿರುಗೇಟು ನೀಡಲು ಸಭೆಯಲ್ಲಿ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆದಿರುವ ಡಿನ್ನರ್ ಮಿಟಿಂಗ್ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

RELATED ARTICLES

Latest News