ಬೆಂಗಳೂರು,ಮೇ 30- ಮಳೆ ಅನಾಹುತಗಳ ಕುರಿತು ಮುನ್ನೆಚ್ಚರಿಕೆ, ಕೃಷಿ ಚಟುವಟಿಕೆಗಳಿಗೆ ಪೂರಕ ಸೌಲಭ್ಯ ಹಾಗೂ ಮಳೆ ಬಾಧಿತ ಪ್ರದೇಶಗಳಲ್ಲಿ ಚುರುಕಿನ ರಕ್ಷಣಾ ಕಾರ್ಯಚರಣೆಗಳ ಬಗ್ಗೆ ಜಾಗೃತರಾಗಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧ ಸಮೇಳನ ಸಭಾಂಗಣದಲ್ಲಿ ಇಂದಿನಿಂದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಹಾಗೂ ಸಚಿವರು ಪ್ರಗತಿ ಪರಿಶೀಲನಾ ಸಭೆ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣೇಭೈರೇಗೌಡ, ಇಂಧನ ಸಚಿವ ಕೆ.ಜೆ.ಜಾರ್ಜ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಯವರ ಡ್ಯಾಶ್‌ಬೋರ್ಡ್‌ನಲ್ಲಿ ಅಭಿವೃದ್ದಿ ಕಾರ್ಯಗಳ ಸಮಗ್ರ ಮಾಹಿತಿಯನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಉತ್ತಮ ಕಾರ್ಯ ನಿರ್ವಹಣೆಗಾಗಿ ಕೆಲವು ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಅಭಿನಂದನಾ ಪತ್ರ ನೀಡಿದರು. ಗ್ಯಾರಂಟಿ ಯೋಜನೆಗಳಡಿ 2023ರಿಂದ ಇಲ್ಲಿಯವರೆಗೆ 64,200 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸಲಾಗಿದೆ.
ಇನ್ವೆಸ್ಟ್ ಕರ್ನಾಟಕ ಯೋಜನೆಯಡಿ 6,81,535 ಕೋಟಿ ರೂ.ಗಳ ಬಂಡವಾಳ ಹರಿದುಬಂದಿದೆ. ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ 2,13,005 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಪ್ರಗತಿಪಥ ಯೋಜನೆಯಡಿ 7,110 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಜನಸ್ಪಂದನ ಯೋಜನೆಯಡಿ 1,49,706 ಕುಂದುಕೊರತೆಗಳನ್ನು ಬಗೆಹರಿಸಲಾಗಿದೆ. ಇ-ಸಂಗ್ರಹಣ ಯೋಜನೆಯಡಿ 90,245 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಮಾಹಿತಿ ಹಕ್ಕು ಯೋಜನೆಯಡಿ 1,12,429 ಅರ್ಜಿಗಳು ವಿಲೇವಾರಿಯಾಗಿವೆ.
ನೀರಾವರಿ ಯೋಜನೆಯಲ್ಲಿ 17,12,129 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. 8,118.59 ಕೋಟಿ ರೂ.ಗಳನ್ನು ವಿದ್ಯಾರ್ಥಿವೇತನ ರೂಪದಲ್ಲಿ ಪಾವತಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 4,62,90,159 ಫಲಾನುಭವಿಗಳು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ. ಸಕಾಲ ಯೋಜನೆಯಡಿ 3,36,73,153 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲು 4000 ಸೋಲಾರ್ ಪಂಪ್‌ಗಳನ್ನು ಅಳವಡಿಸಿರುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ.