ಬೆಂಗಳೂರು, ಆ.12- ತಮ ಆಪ್ತ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ಬಳಿಕ ತೀವ್ರ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಮಧ್ಯಾಹ್ನದಿಂದಲೂ ಕಲಾಪದಲ್ಲಿ ಭಾಗವಹಿಸದೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದೇಕೆ? ಎಂಬ ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದು, ಸದನಕ್ಕೆ ಉತ್ತರ ನೀಡಲಾಗದೇ ಅಸಹಾಯಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಎಂತಹುದೇ ರಾಜಕೀಯ ಸಂಕಷ್ಟದಲ್ಲೂ ಅಧೀರರಾಗದೇ ಸಿದ್ದರಾಮಯ್ಯ ವಿಧಾನಮಂಡಲದ ಅಧಿವೇಶನವನ್ನು ಎದುರಿಸಿದ ಉದಾಹರಣೆಗಳಿವೆ. ಆದರೆ, ರಾಜಣ್ಣ ಅವರ ವಿಚಾರದಲ್ಲಿ ಏಕಾಏಕಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡು ಒತ್ತಡ ಏರಿ ಅದನ್ನು ಜಾರಿ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ತಾಕೀತು ಮಾಡಿತ್ತು.
ರಾಜಣ್ಣ ಅವರು, ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಲು ಸಿದ್ದರಾಮಯ್ಯ ಅವರು ಮುಂದಾಗಿದ್ದರು. ಆದರೆ, ಅದಕ್ಕೆ ಅವಕಾಶ ನೀಡದೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆ.ಸಿ ವೇಣುಗೋಪಾಲ್ ಅವರು ಪಟ್ಟು ಹಿಡಿದಿದ್ದರು. ಅನಿವಾರ್ಯವಾಗಿ ಸಿದ್ದರಾಮಯ್ಯ ಅವರು ರಾಜಭವನಕ್ಕೆ ರಾಜಣ್ಣ ಅವರನ್ನು ವಜಾಗೊಳಿಸುವ ಪ್ರಸ್ತಾವನೆಯನ್ನು ರವಾನಿಸಬೇಕಾಯಿತು.ಇಷ್ಟು ದಿನ ರಾಜಣ್ಣ ಅವರ ಅನಪೇಕ್ಷಿತ ಹೇಳಿಕೆಗಳನ್ನು ಸಹಿಸಿಕೊಂಡಿದ್ದ ಸಿದ್ದರಾಮಯ್ಯ ಅವರಿಗೆ, ಈಗ ಅದೇ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿರುವ ಬೆಳವಣಿಗೆಯನ್ನು ಜೀರ್ಣಿಸಿಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಿಸಿದೆ.
ಈ ಹಿಂದೆ ನಾಗೇಂದ್ರ ಅವರ ಪ್ರಕರಣದಲ್ಲಿ ಮೊದಲು ರಾಜೀನಾಮೆಯನ್ನು ಅಂಗೀಕರಿಸಲಾಗಿತ್ತು, ಹಾಗಾಗಿ ಸಿದ್ದರಾಮಯ್ಯ ಅವರಿಗೆ ಆ ವೇಳೆ ಸ್ಪಷ್ಟನೆಗೆ ಸ್ಪಷ್ಟವಾದ ಕಾರಣಗಳಿದ್ದವು. ಸ್ವಯಂಪ್ರೇರಿತವಾಗಿ ಸಚಿವರೇ ರಾಜೀನಾಮೆ ಕೊಟ್ಟಿದ್ದಾರೆ. ಸರ್ಕಾರ ಅದನ್ನು ಅಂಗೀಕರಿಸಲಾಗಿದೆೆ ಎಂದು ಹೇಳಿಕೊಂಡಿದ್ದರು. ರಾಜಣ್ಣ ಅವರ ಪ್ರಕರಣದಲ್ಲಿ ನೇರವಾಗಿ ವಜಾಗೊಳಿಸಿರುವುದರಿಂದ ಯಾವ ಕಾರಣ ಎಂದು ವಿಧಾನಮಂಡಲದ ಅಧಿವೇಶನದಲ್ಲಿ ವಿವರಣೆ ನೀಡಲಾಗದೇ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಒಂದೆಡೆ ತಮ ಆಪ್ತರನ್ನು ರಕ್ಷಣೆ ಮಾಡಿಕೊಳ್ಳದೇ ಇರುವ ನೋವು ಕಾಡುತ್ತಿದ್ದರೇ, ಮತ್ತೊಂದೆಡೆ ವಿರೋಧ ಪಕ್ಷಗಳಿಗೆ ಉತ್ತರ ನೀಡಲಾಗದ ಅಸಹಾಯಕತೆ ಸಿದ್ದರಾಮಯ್ಯ ಅವರದ್ದಾಗಿದೆ. ಹೀಗಾಗಿ ನಿನ್ನೆ ಮಧ್ಯಾಹ್ನದಿಂದಲೂ ವಿಧಾನಮಂಡಲದ ಕಲಾಪಗಳಿಂದ ದೂರ ಉಳಿದು ತಮ ಅಸಮಾಧಾನದ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ರಾಜಣ್ಣ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರನ್ನು ವಜಾಗೊಳಿಸುವ ನಿರ್ಧಾರವನ್ನು ತಾವೇ ತೆಗೆದುಕೊಂಡಿರುವುದಾಗಿ ಘೋಷಣೆ ಮಾಡುವಂತೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದೆ ಎನ್ನಲಾಗಿದೆ. ಈ ರೀತಿ ಹೇಳಲು ನಿರಾಕರಿಸಿದ ಸಿದ್ದರಾಮಯ್ಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ರಾಜಣ್ಣ ನವರ ಹೇಳಿಕೆಯಿಂದ ಪಕ್ಷದಲ್ಲಿ ಶಿಸ್ತಿನ ಉಲ್ಲಂಘನೆಯಾಗಿದೆ.
ಹಾಗಾಗಿ ಹೈಕಮಾಂಡ್‌ನ ನಿರ್ದೇಶನ ಆಧರಿಸಿ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಾಗಿ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪದ ಹೈಕಮಾಂಡ್ ರಾಜಣ್ಣ ಅವರ ಅಶಿಸ್ತಿನ ಹೊಣೆಗಾರಿಕೆಯನ್ನು ನೀವೇ ಹೊತ್ತುಕೋಳ್ಳಬೇಕು. ಸಂಫುಟದಿಂದ ವಜಾಗೊಳಿಸಿರುವುದು ನನ್ನದೇ ನಿರ್ಧಾರ ಎಂದುಹೇಳುವಂತೆ ಒತ್ತಡ ಹಾಕುತ್ತಿದ್ದು, ಸದನದಲ್ಲಿ ಯಾವ ರೀತಿಯ ಹೇಳಿಕೆ ನೀಡಬೇಕು ಎಂಬ ಗೊಂದಲಕ್ಕೆ ಸಿಲುಕಿ ಸಿದ್ದರಾಮಯ್ಯ ಇಂದು ಮಧ್ಯಾಹ್ನದವರೆಗೂ ಸದನಕ್ಕೆ ಹಾಜರಾಗದೇ ಕಲಾಪದಿಂದ ದೂರ ಉಳಿದಿದ್ದರು.
ವಿರೋಧ ಪಕ್ಷಗಳು ರಾಜಣ್ಣ ಅವರನ್ನು ಪದಚ್ಯುತಿಗೊಳಿಸಿದ್ದು ಏಕೆ? ಎಂದು ಉತ್ತರ ನೀಡುವಂತೆ ವಿಧಾನ ಮಂಡಲದಲ್ಲಿ ಪದೇ ಪದೇ ಒತ್ತಾಯ ಮಾಡುತ್ತಿದ್ದರೂ ಸಿದ್ದರಾಮಯ್ಯ ಕಲಾಪಕ್ಕೆ ಹಾಜರಾಗಲಿಲ್ಲ. ಮುಖ್ಯಮಂತ್ರಿ ಅವರ ಅನುಪಸ್ಥಿತಿಯಲ್ಲಿ ಯಾವ ಸಚಿವರಿಗೂ ಸರಿಯಾದ ಉತ್ತರ ನೀಡಲಾಗದೇ ಆಡಳಿತ ಪಕ್ಷ ಸದನದಲ್ಲಿ ಮುಜುಗರಕ್ಕೆ ಒಳಗಾಯಿತು.