Friday, October 3, 2025
Homeಇದೀಗ ಬಂದ ಸುದ್ದಿಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಸಿಟಿರೌಂಡ್ಸ್, ರಸ್ತೆಗಳ ಪರಿಶೀಲನೆ

ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಸಿಟಿರೌಂಡ್ಸ್, ರಸ್ತೆಗಳ ಪರಿಶೀಲನೆ

CM Siddaramaiah inspects roads in Bengaluru

ಬೆಂಗಳೂರು, ಸೆ.27 : ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇವುಗಳನ್ನು ದುರಸ್ತಿಗೊಳಿಸಿ, ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರು ನಗರ ರಸ್ತೆಗಳ ಪರಿಸ್ಥಿತಿ ಅರಿಯಲು ಸಿಟಿರೌಂಡ್ಸ್ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದ್ದು, ಈ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು. ರಸ್ತೆ ದುರಸ್ತಿ ಕಾರ್ಯ ಸರಿಯಿಲ್ಲದ ಕಾರಣ, ಸಂಬಂಧಪಟ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ನ್ನು ಅಮಾನತ್ತುಗೊಳಿಸಲಾಗಿದೆ. ಗುಂಡಿ ಮುಚ್ಚಲು ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಹಾಗೇ ಬಿಟ್ಟಿದ್ದ ಕಾರಣ, ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಹೆಣ್ಣೂರು ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ನಿರ್ವಹಣೆಯನ್ನು ಸಂಬಂಧಪಟ್ಟ ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. 5 ಕಿ.ಮೀ. ರಸ್ತೆ ಕಾಮಗಾರಿಯನ್ನು ಕಿ.ಮೀ. ಒಂದಕ್ಕೆ 13 ಕೋಟಿಗಳನ್ನು ಸರ್ಕಾರ ವ್ಯಯಿಸುತ್ತಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ರಸ್ತೆಗಳಲ್ಲಿ ಯಾವುದೇ ಗುಂಡಿಗಳಿಲ್ಲದಂತೆ ಮುಚ್ಚಬೇಕೆಂದು ಸೂಚನೆ ನೀಡಲಾಗಿದೆ ಎಂದರು.

ಬಿಜೆಪಿ ಅವಧಿಯಲ್ಲಿ ರಸ್ತೆ ದುರಸ್ತಿ ನಡೆಯಲಿಲ್ಲ
ರಸ್ತೆ ಪರಿಶೀಲನೆ ನಡೆಯಲಿದೆಯೆಂಬ ಕಾರಣಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಗುಂಡಿಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಸ್ತೆ ಗುಂಡಿಗಳಿರುವುದು ನಿಜ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ ಗುಂಡಿಗಳ ದುರಸ್ತಿ ನಡೆದಿದ್ದರೆ, ರಸ್ತೆಗಳು ಇಂತಹ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ಮಳೆಗಾಲ ಮುಗಿಯುವುದರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನ್ಯಾಯಾಲಯದ ನಿರ್ದೇಶನದಂತೆ ಸಮೀಕ್ಷೆ
ಸಮೀಕ್ಷೆಯಲ್ಲಿ ಯಾರೂ ಭಾಗವಹಿಸಬಾರದೆಂದು ಸಂಸದ ತೇಜಸ್ವಿ ಸೂರ್ಯ ಅವರು ಕರೆನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮೀಕ್ಷೆಯನ್ನು ತಡೆಯಬೇಕೆಂದು ನ್ಯಾಯಾಲಯಕ್ಕೆ ಹೋಗಲಾಗಿತ್ತು. ನ್ಯಾಯಾಲಯ ನೀಡಿರುವ ನಿರ್ದೇಶನಗಳಂತೆ ಸಮೀಕ್ಷೆಯನ್ನು ನಡೆಸಲಾಗುವುದು. ಈಗಾಗಲೇ ಸುಮಾರು 10 ಲಕ್ಷ ಜನರ ಸಮೀಕ್ಷೆ ಪೂರ್ಣಗೊಂಡಿದೆ ಎಂದರು.

ತ್ಯಾಜದ ಸಮರ್ಪಕ ನಿರ್ವಹಣೆಗೆ ಸೂಚನೆ
ತ್ಯಾಜ್ಯ ನಿರ್ವಹಣೆ ಸಮಸ್ಯೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ರಸ್ತೆಗಳ ಕೆಲೆವೆಡೆಗಳಲ್ಲಿ ತ್ಯಾಜ್ಯವನ್ನು ನಿರ್ವಹಿಸದೇ ಹಾಗೇ ಬಿಟ್ಟಿದ್ದು, ತ್ಯಾಜ್ಯವನ್ನು ತ್ವರಿತವಾಗಿ ತೆಗೆಯಬೇಕೆಂದು ಸೂಚನೆ ನೀಡಲಾಗಿದ್ದು,, ಇಲ್ಲವಾದಲ್ಲಿ ಸಂಬಂಧಪಟ್ಟ ಕಮೀಷನರ್ ಹಾಗೂ ಇಂಜಿನಿಯರ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

RELATED ARTICLES

Latest News