ಬೆಂಗಳೂರು, ಆ.22– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಬಳಸಿಕೊಂಡು ಮುಡಾಕ್ಕೆ ಪತ್ನಿ ಪಾರ್ವತಿ ಬರೆದಿರುವ ಪತ್ರವನ್ನು ತಿರುಚಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ ಪತ್ನಿ ಇಂತಹುದೇ ಬಡಾವಣೆಯಲ್ಲಿ ಸೈಟು ಕೊಡಿ ಎಂದು ಕೇಳಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರ ಮಾತಿನಲ್ಲಿ ಎಷ್ಟು ಸತ್ಯ ಅಡಗಿದೆ ಎಂಬ ಅನುಮಾನ ಈಗ ಮತ್ತಷ್ಟು ದಟ್ಟವಾಗಿದೆ.
ನಿವೇಶನ ಕೇಳಿ ಮುಖ್ಯಮಂತ್ರಿಗಳ ಪತ್ನಿ ಅವರು ಮೂಡಾಗೆ ಬರೆದಿರುವ ಪತ್ರವನ್ನು ತಿರುಚಿ, ಸಾಕ್ಷಿ ನಾಶ ಮಾಡಲು ಯತ್ನಿಸಿರುವ ಸಂದೇಹ ವ್ಯಕ್ತವಾಗುತ್ತಿದ್ದು, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ಎಲ್ಲ ಅನುಮಾನಗಳು ಬಗೆಹರಿಯಬೇಕಾದರೆ ಸಿದ್ದರಾಮಯ್ಯ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ, ಪಾರದರ್ಶಕ ತನಿಖೆಗೆ ಅನುವು ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮತ್ತೊಂದು ಪೋಸ್ಟ್ ಮಾಡಿದ್ದ ಅಶೋಕ್ ಅವರು, ದುಷನ್ ಕಹಾ ಹೈ ಅಂದ್ರೆ ಕಾಂಗ್ರೆಸ್ ಪಾರ್ಟಿ ತುಂಬಾ ಹೈ. ಸಿಎಂ ಸಿದ್ದರಾಮಯ್ಯ ಅವರಿಗೆ ನಮ ಸಂಪೂರ್ಣ ಬೆಂಬಲ ಇದೆ ಅಂತ ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವ ಬಹುತೇಕ ಕಾಂಗ್ರೆಸ್ ನಾಯಕರು ಅಂತರಂಗದಲ್ಲಿ ಬೇರೆಯದೇ ಲೆಕ್ಕಾಚಾರ ಹಾಕುತ್ತಿದ್ದಾರೆ.
ಸಿದ್ದರಾಮಯ್ಯ ಅವರೇ, ನಿಮ ಬೆನ್ನಿಗೆ ನಿಲ್ಲುತ್ತೇವೆ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕುವ ಹಿತಶತೃಗಳು ನಿಮ ಪಕ್ಷದಲ್ಲೇ ಬಹಳ ಮಂದಿ ಇದ್ದಾರೆ. ಇಡೀ ರಾಜ್ಯ ತಮ ರಾಜೀನಾಮೆಗಾಗಿ ಕಾತುರದಿಂದ ಎದುರು ನೋಡುತ್ತಿದೆ. ಕನ್ನಡಿಗರ ತಾಳೆ ಪರೀಕ್ಷೆ ಮಾಡಬೇಡಿ. ಆದಷ್ಟು ಬೇಗ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ ಎಂದಿದ್ದರು.
ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ, ಭ್ರಷ್ಟಾತಿ ಭ್ರಷ್ಟ ಸಿದ್ದರಾಮಯ್ಯನವರ ಮುಡಾ ಹಗರಣದ ಒಂದೊಂದೇ ದಾಖಲೆಗಳು ದಿನಕ್ಕೊಂದರಂತೆ ಬಯಲಾಗುತ್ತಲೇ ಇವೆ. ಇದರ ನಡುವೆ ಬಿಡುಗಡೆ ಆಗುತ್ತಿರುವ ದಾಖಲೆಗಳನ್ನು ಕುತಂತ್ರದ ಮೂಲಕ ಮುಚ್ಚಿ ಹಾಕಲಾಗುತ್ತಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ವಿಜಯನಗರದಲ್ಲೇ ಸೈಟು ಕೊಡಿ ಎಂದು ಪತ್ರ ಬರೆದಿದ್ದು ಬೆಳಕಿಗೆ ಬಂದಿದೆ. ಆದರೆ, ಸಿದ್ದರಾಮಯ್ಯ ಅವರು ಹಾಕಿದ ಭ್ರಷ್ಟಾಚಾರದ ಗಂಜಿಗೆ ಮುಡಾ ಅಧಿಕಾರಿಗಳು ಸಿಎಂ ಪತ್ನಿ ಬರೆದ ಪತ್ರದಲ್ಲಿನ ಸಾಲುಗಳಿಗೆ ವೈಟ್ನರ್ ಹಾಕಿ ಹಗರಣ ಮುಚ್ಚಿ ಹಾಕಲು ಸಾಕ್ಷ್ಯ ನಾಶ ಮಾಡಿದ್ದಾರೆ.
ತಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ವಾಮಮಾರ್ಗ ಹಿಡಿದಿರುವ ಸಿದ್ದರಾಮಯ್ಯನವರು ಕೊತ್ವಾಲ್ ಶಿಷ್ಯಂದಿರನ್ನು ರಾಜ್ಯದ ತುಂಬಾ ಬಿಟ್ಟು ದೊಂಬಿ ಎಬ್ಬಿಸುತ್ತಿದ್ದಾರೆ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ರಾಜೀನಾಮೆ ನೀಡಬೇಕು. ಹಾಗಾದಾರೆ ಮಾತ್ರ ಭ್ರಷ್ಟಾಚಾರ ಹೊರ ಬರಲು ಸಾಧ್ಯ. ಇಲ್ಲದೆ ಹೋದರೆ ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಂಡು ಜಗತ್ತಿನ ಮುಂದೆ ನಾನು ಸತ್ಯಹರಿಶ್ಚಂದ್ರನ ತುಂಡು ಎಂದು ಲಜ್ಜೆಬಿಟ್ಟು ಬಿಂಬಿಸಿಕೊಂಡರೂ ಅಚ್ಚರಿ ಇಲ್ಲ ಎಂದು ಕಿಡಿಕಾರಿದೆ.