ಬೆಂಗಳೂರು, ಆ.7- ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ತಮ ಸಹಮತ ಇದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತದ ಸರಕುಗಳ ಮೇಲೆ ಅಮೆರಿಕಾ ಅಧ್ಯಕ್ಷರು ಹೆಚ್ಚುವರಿ ಸುಂಕ ವಿಧಿಸಿರುವುದನ್ನು ಪ್ರಶ್ನಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣದಲ್ಲಿ ಅವರು, ಅಮೆರಿಕಾ ಅಧ್ಯಕ್ಷರು ಭಾರತೀಯ ಸರಕುಗಳಿಗೆ ಶೇ. 50ರಷ್ಟು ಸುಂಕ ವಿಧಿಸಿರುವುದು ಆರ್ಥಿಕ ಬ್ಲಾಕ್‌ಮೇಲ್ ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಮಂತ್ರಿ ನರೇಂದ್ರಮೋದಿ ನಿಜವಾದ ರಾಜತಾಂತ್ರಿಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಜಿಎಸ್‌ಟಿ, ನೋಟು ರದ್ದತಿ, ಚೀನಾದ ಆಕ್ರಮಣ, ಮೋದಿ ಮತ್ತು ಅದಾನಿ ಅವರ ನಂಟು, ಕೋವಿಡ್‌ನ ವೈಫಲ್ಯ, ಕೃಷಿ ಕಾನೂನುಗಳು, ರಫೇಲ್ ಹಗರಣ, ಪಿಎಂ-ಕೇರ್ ನಿಧಿ, ಚುನಾವಣಾ ಬಾಂಡ್ ಸಂಬಂಧಪಟ್ಟಂತೆ ರಾಹುಲ್‌ಗಾಂಧಿ ಅವರು ಮೊದಲೇ ಹೇಳಿಕೆಗಳನ್ನು ನೀಡಿದರು. ಬಿಜೆಪಿ ಅವರನ್ನು ಅಪಹಾಸ್ಯ ಮಾಡಿತ್ತು. ಆದರೆ ತಮ ಹೆಳಿಕೆಗಳನ್ನು ರಾಹುಲ್ ಗಾಂಧಿ ಪದೇ-ಪದೇ ಸಾಬೀತು ಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
2019ರಲ್ಲಿ ಹೌಡಿ ಮೋದಿ ಹಾಗೂ ನಮಸ್ತೆ ಟ್ರಂಪ್ ಎಂಬ ಕಾರ್ಯಕ್ರಮಗಳು ಪರಸ್ಪರ ಅಮೆರಿಕಾ ಮತ್ತು ಭಾರತದಲ್ಲಿ ನಡೆದಿದ್ದವು. ಆದರೆ ಈ ಯಾವ ಕಾರ್ಯಕ್ರಮಗಳಿಂದಲೂ ಟ್ರಂಪ್ ಪ್ರಭಾವಿತರಾಗಿಲ್ಲ ಹಾಗೂ ರಾಜತಾಂತ್ರಿಕತೆಯಿಂದ ಗಮನಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತದ ಮೇಲೆ ತೆರಿಗೆ ವಿಧಿಸಿರುವುದು ನಿಜವಾದ ಸ್ನೇಹಿತರು ಮಾಡುವ ಕೆಲಸವಲ್ಲ. ಆಪರೇಷನ್ ಸಿಂಧೂರ ಕಾರ್ಯಚರಣೆ ನಡುವೆ ಕದನ ವಿರಾಮಕ್ಕೆ ನಾನೇ ಕಾರಣ ಎಂದು ಟ್ರಂಪ್ 33 ಬಾರಿ ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಅಮೆರಿಕದಲ್ಲಿ ಆತಿಥ್ಯ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ವಯಕ್ತಿಕವಾದ ಪ್ರಚಾರದಿಂದ ವಿದೇಶಾಂಗ ನೀತಿಯನ್ನು ನಿರ್ವಹಣೆ ಮಾಡಲಾಗುವುದಿಲ್ಲ. 1970ರ ದಶಕದಲ್ಲಿ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಅಮೆರಿಕಾದ ಒತ್ತಡದ ನಡುವೆಯೂ ದೃಢವಾದ ನಿಲುವು ತೆಗೆದುಕೊಂಡಿದ್ದರು. ಅವರಿಂದ ಮೋದಿಯವರು ಕಲಿಯುವುದು ಬಹಳಷ್ಟಿದೆ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಭಾರತದ ಮೇಲೆ ಸುಂಕ ವಿಧಿಸಿದ ಟ್ರಂಪ್, ಈಗ ರಷ್ಯಾ ಜೊತೆಗಿನ ಸಂಬಂಧ ಕಡಿತಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದು ನಮ ದೇಶದ ಸಾರ್ವಭೌಮತ್ವದ ಮೇಲಿನ ನೇರ ದಾಳಿಯಾಗಿದೆ. ದೇಶೀಯ ಹಿತಾಸಕ್ತಿಗೆ ಅನುಗುಣವಾಗಿ ವ್ಯಾಪಾರದ ಆಯ್ಕೆಗಳನ್ನು ವಿದೇಶಿ ಶಕ್ತಿಗಳು ನಿರ್ಧರಿಸುವುದು ಸಹನೀಯವಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.