Friday, November 22, 2024
Homeರಾಜ್ಯಆಡಳಿತ ಸುಧಾರಣೆ ಕುರಿತು ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯಾಧಿಕಾರಿಗಳ ಜೊತೆ ಸಿಎಂ ಸಭೆ

ಆಡಳಿತ ಸುಧಾರಣೆ ಕುರಿತು ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯಾಧಿಕಾರಿಗಳ ಜೊತೆ ಸಿಎಂ ಸಭೆ

ಬೆಂಗಳೂರು,ಜು.8– ರಾಜ್ಯದ ಆಡಳಿತ ಸುಧಾರಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಇಂದಿನಿಂದ ಆರಂಭಗೊಂಡ 2 ದಿನಗಳ ಸಮಾವೇಶದಲ್ಲಿ ಬಜೆಟ್‌ ಘೋಷಿತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಜೊತೆಗೆ ಪಂಚಖಾತ್ರಿ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಪರಾಮರ್ಶೆಗಳು ನಡೆದಿವೆ. ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹಲವು ಕಡೆ ಪ್ರವಾಹ ಪರಿಸ್ಥಿತಿ ಕಂಡುಬರುವ ಸಾಧ್ಯತೆ ಇದೆ. ಕರಾವಳಿ ಸೇರಿದಂತೆ ಕೆಲವು ಭಾಗಗಳಲ್ಲಿ ಸಾಕಷ್ಟು ಹಾನಿಯಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಮಸ್ಯೆ ಪೀಡಿತ ಪ್ರದೇಶಗಳಿಗೆ ತಕ್ಷಣವೇ ತೆರಳಿ ನೆರವು ನೀಡಬೇಕು ಎಂದು ತಾಕೀತು ಮಾಡಿದ್ದಾರೆ.ಹಲವಾರು ಕಡೆ ಅಧಿಕಾರಿಗಳು ಸ್ಥಳಗಳಿಗೆ ತೆರಳದೆ ಕೇಂದ್ರಸ್ಥಾನದಲ್ಲಿಲ್ಲದೆ ಜನರಿಗೆ ಅಲಭ್ಯವಾಗಿರುವ ದೂರುಗಳಿವೆ. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರವೃತ್ತಿ ನಿಲ್ಲಬೇಕು. ಸಾರ್ವಜನಿಕರ ಭೇಟಿ ಮತ್ತು ಸರ್ಕಾರದ ಕೆಲಸಗಳು ಸರಿಸಮಾನವಾಗಿ ನಡೆಯಬೇಕು.

ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸಿಕೊಡಲು ಸರ್ಕಾರ ಸಿದ್ಧವಿದೆ. ಸರ್ಕಾರದ ಆಶಯಗಳಿಗೆ ಪೂರಕವಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಜಡ್ಡುಗಟ್ಟಿದ ವ್ಯವಸ್ಥೆ ಬದಲಾಗಬೇಕು. ಜನಸ್ನೇಹಿ ಆಡಳಿತ ನಮ ಆದ್ಯತೆ ಎಂದು ಸೂಚನೆ ನೀಡಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಳ್ಳಬೇಕು. ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಭ್ರಷ್ಟಾಚಾರ ನಿಯಂತ್ರಣ, ಅನಗತ್ಯ ವಿಳಂಬದಂತಹ ಪಿಡುಗುಗಳನ್ನು ತೊಡೆದು ಹಾಕಬೇಕು ಎಂದು ಆದೇಶಿಸಿದ್ದಾರೆ.

ಪ್ರತಿ ಜಿಲ್ಲಾಧಿಕಾರಿಗಳಿಂದಲೂ ಪ್ರತ್ಯೇಕ ವಿವರಣೆಗಳನ್ನು ಪಡೆದುಕೊಂಡ ಮುಖ್ಯಮಂತ್ರಿಯವರು ಜಿಲ್ಲೆ ಉಸ್ತುವಾರಿ ಸಚಿವರ ಜೊತೆ ಸಹಯೋಗದೊಂದಿಗೆ ಕೆಲಸ ಮಾಡಿ, ಜನಪ್ರತಿನಿಧಿಗಳು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದಾಗ ಅದಕ್ಕೆ ತಕ್ಷಣ ಸ್ಪಂದಿಸಿ ಎಂದು ಸಲಹೆ ನೀಡಿದ್ದಾರೆ.

ಆಡಳಿತದಲ್ಲಿ ಅಸಡ್ಡೆ ತೋರುವವರಗೆ ನಮ ಸರ್ಕಾರದಲ್ಲಿ ಕ್ಷಮೆ ಇಲ್ಲ. ಯಾವುದೇ ಜನಪರ ಯೋಜನೆಗಳಿಗೆ ಮತ್ತು ಬಜೆಟ್‌ ಅನುಮೋದಿತ ಕಾರ್ಯಕ್ರಮಗಳಿಗೆ ಆರ್ಥಿಕ ಸಮಸ್ಯೆಯಿಲ್ಲ. ಹೀಗಾಗಿ ಹಣಕಾಸಿನ ನೆಪ ಹೇಳಿ ಎಲ್ಲಿಯೂ ಯೋಜನೆಯ ಜಾರಿಗೆ ವಿಳಂಬವಾಗಬಾರದು ಎಂದು ಎಚ್ಚರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡೆಂಘೀ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಜನಸಾಮಾನ್ಯರನ್ನು ಬಾಧಿಸುತ್ತಿವೆ. ಸೊಳ್ಳೆ ನಿಯಂತ್ರಣ ಸೇರಿದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಮೂಲಸೌಲಭ್ಯ ವ್ಯವಸ್ಥೆಯನ್ನು ಸುಧಾರಿತ ಸ್ಥಿತಿಯಲ್ಲಿಡಬೇಕು ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ.

RELATED ARTICLES

Latest News